ಬೆಂಗಳೂರು :ನಾಲ್ಕು ದಶಕಗಳ ರಾಜಕಾರಣದಲ್ಲಿ ಸ್ವಜಿಲ್ಲೆ ಮೈಸೂರಿನಲ್ಲಿ ನಿಂತು ಗೆಲ್ಲುವ ವಿಶ್ವಾಸ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಾಟಿ ಬೀಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಾದಾಮಿಯಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಗೆದ್ದು ಬರುವ ವಿಶ್ವಾಸ ಇಲ್ಲ. ವಿಶ್ವಾಸ ಇದ್ದಿದ್ದರೆ ಬಾದಾಮಿ, ಚಾಮುಂಡೇಶ್ವರಿಯಲ್ಲಿ ನಿಂತು ಗೆಲ್ಲುತ್ತಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ಸೋಲಿನ ಭೀತಿ ಇರುವ ಕಾರಣ ಸಿದ್ದರಾಮಯ್ಯ, ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ಸವಾಲನ್ನು ನಾನು ಸ್ವೀಕರ ಮಾಡುತ್ತೇನೆ ಎಂದು ಹೇಳುವುದಿಲ್ಲ, ಕೋಲಾರ ಕ್ಷೇತ್ರದ ಜನರು ಈ ಸವಾಲನ್ನು ಸ್ವೀಕರ ಮಾಡುತ್ತಾರೆ ಎಂದು ಸಿಟಿ ರವಿ ಹೇಳಿದರು. ಈ ಚುನಾವಣೆ ಸಿದ್ದರಾಮಯ್ಯ ನೀತಿಯ ನಡುವಿನ ಹೋರಾಟವೇ ಹೊರತು ವ್ಯಕ್ತಿಗತವಾಗಿ ಸಿದ್ದರಾಮಯ್ಯ ಅವರ ನಡುವಿನ ಹೋರಾಟವಲ್ಲ ಎಂದು ಸಿಟಿ ರವಿ ಟಾಂಗ್ ಕೊಟ್ಟರು.
ಈ ಮೂಲಕ ಅವರಿಗೆ ಓಲೈಕೆ ರಾಜನೀತಿ ಇದ್ದು ಪಿಎಫ್ಐ, ಎಸ್ಡಿಪಿಐ ಅಂತಹ ಸಂಘಟನೆಗಳನ್ನು ಓಲೈಕೆ ಮಾಡುತ್ತಾರೆ. ಹೀಗಿರುವಾಗ ಅವರು ಯಶಸ್ಸು ಕಾಣಲು ಸಾಧ್ಯವಿಲ್ಲ. ಸಿದ್ದರಾಮಯ್ಯ ವಿರುದ್ಧ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ತಿರುಗೇಟು ನೀಡಿದರು.
ಯಾರನ್ನೂ ರಕ್ಷಣೆ ಮಾಡಲ್ಲ :ಇದೇ ವೇಳೆ ಸಿಟಿ ರವಿ, ಸ್ಯಾಂಟ್ರೋ ರವಿ ಬಂಧನ ವಿಳಂಬದ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಮತ್ತು ಕಾನೂನಿಗೆ ಯಾರೂ ಅತೀತರಲ್ಲ ಎಂದು ಹೇಳಿದರು. ತನಿಖೆ ನಡೆಯುತ್ತಿರುವಾಗ ಎಷ್ಟು ದಿನ ತಪ್ಪಿಸಿಕೊಳ್ಳಲು ಆಗುತ್ತದೆ. ಇದೇ ಪ್ರಶ್ನೆಯನ್ನು ಪೊಲೀಸ್ ನೇಮಕಾತಿ ಅಕ್ರಮದ ವೇಳೆಯೂ ಕಾಂಗ್ರೆಸ್ ನಾಯಕರು ಕೇಳಿದ್ದರು. ಈಗ ತನಿಖೆ ಬಯಲಾದ ಮೇಲೆ ಬಾಯಿ ಮುಚ್ಕೊಂಡಿದ್ದಾರೆ. ಹಾಗೇ ಇದಕ್ಕೂ ಒಂದು ದಿನ ಬಾಯಿ ಮುಚ್ಚಿಕೊಳ್ಳಬೇಕಾಗುತ್ತದೆ ಎಂದರು. ಸ್ಯಾಂಟ್ರೋ ರವಿ ಎಷ್ಟು ದಿನ ತಲೆ ತಪ್ಪಿಸಿಕೊಂಡು ಓಡಾಡೋಕ್ಕಾಗುತ್ತೆ?. ಹಿಡಿಲೇಬೇಕಾಗುತ್ತದೆ. ಹಿಡಿದೇ ಹಿಡೀತಾರೆ ಎಂದು ಹೇಳಿದರು.