ಬೆಂಗಳೂರು: ವಿಧಾನ ಮಂಡಲ ಉದ್ದೇಶಿಸಿ ರಾಜ್ಯಪಾಲರು ನಡೆಸಿದ್ದು ಗೊತ್ತು ಗುರಿ ಇಲ್ಲದ ಭಾಷಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣ ಸಾಮಾನ್ಯವಾಗಿ ಸರ್ಕಾರದ ನೀತಿ ಮತ್ತು ದ್ಯೇಯೋದ್ದೇಶವನ್ನು ಈ ಭಾಷಣದ ಮೂಲಕ ನೀಡುವ ಹೇಳಿಕೆ. ಆದರೆ ಇದು ಗೊತ್ತು ಗುರಿ ಇಲ್ಲದಂತಾಗಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಈ ಸರ್ಕಾರದ ಸಾಧನೆ ಬಗ್ಗೆ ಏನನ್ನೂ ಹೇಳಲೇ ಇಲ್ಲ. ನಮ್ಮ ಸರ್ಕಾರದ, ಸಮ್ಮಿಶ್ರ ಸರ್ಕಾರದ ಸಾಧನೆಗಳ ಪ್ರಸ್ತಾಪ ಮಾಡಲಾಗಿದೆ. ಇದಲ್ಲದೆ ಪ್ರವಾಹ ಪೀಡಿತರಿಗೆ ಪರಿಹಾರ ವಿತರಿಸುವ ಬಗ್ಗೆ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರವಾಹ ಸಮಸ್ಯೆ ಎದುರಾಗಿತ್ತು. 3 ರಿಂದ 10ನೇ ತಾರೀಖಿನವರೆಗೆ ಸಮಸ್ಯೆ ಎದುರಾಗಿತ್ತು. ಮನೆ ಕಳೆದುಕೊಂಡವರಿಗೆ, ಬೆಳೆ ಕಳೆದುಕೊಂಡವರಿಗೆ, ಭೂಮಿ ಕೊಚ್ಚಿ ಹೋಗಿರುವುದಕ್ಕೆ ಪರಿಹಾರ ಕೊಡುವ ಕಾರ್ಯ ಆಗಿಲ್ಲ. ಸಂತ್ರಸ್ತರು ಕಷ್ಟದಲ್ಲಿದ್ದಾರೆ. ಶಾಲಾ ಕೊಠಡಿಗಳು ಕೂಡ ನಿರ್ಮಾಣವಾಗಿಲ್ಲ. ಇದು ಸಂವಿಧಾನ ಬಾಹಿರವಾಗಿ ನಿರ್ಮಾಣವಾದ ಸರ್ಕಾರ. ಕಳೆದ ಆರು ತಿಂಗಳಲ್ಲಿ ಸರ್ಕಾರ ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದ್ದಾರೆ ಹೊರತು, ಬೇರೆ ಏನು ಮಾಡಿಲ್ಲ. ರಾಜ್ಯಪಾಲರದ್ದು ಅತ್ಯಂತ ಸಪ್ಪೆ ಭಾಷಣ ಎಂದು ಹೇಳಲು ಬಯಸುತ್ತೇನೆ ಎಂದರು.