ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರೆಂದು ಸಂಬೋಧಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯವು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತವಾಗಬಾರದು ಎಂದು ನಿನ್ನೆ ಶಿಗ್ಗಾವಿಯಲ್ಲಿ ಜೆಪಿ ನಡ್ದಾ ಹೇಳಿಕೆ ನೀಡಿದ್ದರು. ಇದನ್ನು ಟ್ವೀಟ್ ಮೂಲಕ ತೀವ್ರವಾಗಿ ಖಂಡಿಸಿರುವ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಜನರೇ ಜನಾರ್ಧನರು, ಆಶೀರ್ವಾದ ನೀಡಲು ನರೇಂದ್ರ ಮೋದಿ ಅವರು ದೇವರಲ್ಲ, ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿ ಎನ್ನುವುದು ನೆನಪಿರಲಿ ಜೆ ಪಿ ನಡ್ದಾ ಅವರೇ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು ಎನ್ನುವ ನಿಮ್ಮ ಹೇಳಿಕೆ ಬೆದರಿಕೆ ಎಂದಾದರೆ ಅದಕ್ಕೆ ನನ್ನ ಧಿಕ್ಕಾರ ಇದೆ. ಇದು ನಿಮ್ಮ ಅಜ್ಞಾನ ಎಂದಾದರೆ ನಿಮಗೆ ದೇವರು ಸದ್ಬುದ್ಧಿಯ ಆಶೀರ್ವಾದವನ್ನು ನೀಡಲಿ ಎಂದು ಹಾರೈಸುತ್ತೇನೆ ಅಂತಾ ಜೆ ಪಿ ನಡ್ಡಾಗೆ ಟಾಂಗ್ ಕೊಟ್ಟಿದ್ದಾರೆ ಸಿದ್ದರಾಮಯ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಂವಿಧಾನದತ್ತವಾದ ಸಮಾನ ಸ್ಥಾನಮಾನ, ಗೌರವ ಮತ್ತು ಹಕ್ಕುಗಳನ್ನು ಹೊಂದಿರುತ್ತವೆ ಎಂಬುದು ನೆನಪಿರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆಗೆ ಅವಕಾಶ ಇಲ್ಲ ಜೆ ಪಿ ನಡ್ದಾ ಅವರೇ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ನಾನು ವರುಣಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು, ಇಲ್ಲಿನ ಮಣ್ಣಿನ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಈ ಹಿಂದೆ ವರುಣಾವನ್ನು ಪ್ರತಿನಿಧಿಸಿದಾಗೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ದುಡಿದಿದ್ದೇನೆ. ನನ್ನ ಸಾಧನೆಗಳು ಇಲ್ಲಿನ ಜನರ ಬದುಕಿನಲ್ಲಿದೆ. ನನ್ನ ಗೆಲುವಿಗೆ ಇದಕ್ಕಿಂತ ಹೆಚ್ಚೇನು ಬೇಕು? ಎಂದು ಹೇಳಿದರು.