ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಎರಡೂ ಸಿಕ್ಕರೆ ಮಾತ್ರ ತಮ್ಮ ರಾಜೀನಾಮೆ ಹಿಂಪಡೆಯುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜ್ಯ ವಿಧಾನಸಭೆಯ 15 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ ಕಾರಣಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯ ಅವರ ಮನವೊಲಿಸುವ ಪ್ರಯತ್ನವನ್ನು ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ನಿರಂತರವಾಗಿ ಮಾಡಿತ್ತಾ ಬಂದಿದ್ದಾರೆ. ಇದೇ ವಾರ ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ಎರಡು ದಿನ ದೆಹಲಿಯಲ್ಲಿ ತಂಗಿದ್ದ ಸಿದ್ದರಾಮಯ್ಯ ವಿವಿಧ ನಾಯಕರನ್ನು ಭೇಟಿ ಮಾಡಿದ್ದು, ತಾವು ರಾಜೀನಾಮೆ ಹಿಂಪಡೆಯಬೇಕೆಂದರೆ ತಮಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಜೊತೆಗೆ ಪ್ರತಿಪಕ್ಷದ ನಾಯಕ ಸ್ಥಾನ ಎರಡನ್ನೂ ನೀಡಬೇಕು ಎಂದು ವಿವರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕೇವಲ ಪ್ರತಿಪಕ್ಷದ ನಾಯಕ ಸ್ಥಾನ ತಮಗೆ ನೀಡಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಬೇರೊಬ್ಬರಿಗೆ ನೀಡಿದಲ್ಲಿ ತಾವು ಅಧಿಕಾರಕ್ಕೆ ಮಾತ್ರ ಸೀಮಿತವಾಗುತ್ತೇನೆ. ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳುತ್ತೇನೆ ಎಂಬ ಅರಿವು ಸಿದ್ದರಾಮಯ್ಯಗೆ ಆಗಿದೆ. ಇದರಿಂದಲೇ ರಾಜೀನಾಮೆ ಹಿಂಪಡೆಯಬೇಕು ಎಂದರೆ ನನಗೆ ಎರಡು ಸ್ಥಾನಗಳನ್ನೂ ನೀಡಬೇಕು ಎಂದು ಹೈಕಮಾಂಡ್ ನಾಯಕರ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ತಾವು ಕೇವಲ ಅಧಿಕಾರಕ್ಕೆ ಮಾತ್ರ ಸೀಮಿತವಾಗಿರದೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಿದ್ದರಾಮಯ್ಯ ಬಯಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಅಧಿಕಾರ ವಿಕೇಂದ್ರೀಕರಣ:ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಎದುರಿಸುತ್ತಿರುವ ಹಿನ್ನಡೆಗೆ ಅಧಿಕಾರ ಕೇಂದ್ರೀಕರಣ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರದ ವಿಕೇಂದ್ರೀಕರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಸ್ಥಾನ ಶಾಸಕಾಂಗ ಪಕ್ಷದ ನಾಯಕ ಸ್ಥಾನ, ಪ್ರತಿಪಕ್ಷದ ನಾಯಕ ಸ್ಥಾನ ಸೇರಿದಂತೆ ವಿವಿಧ ಸ್ಥಾನಗಳಿಗೆ ಬೇರೆ ಬೇರೆ ನಾಯಕರನ್ನು ನಿಯೋಜಿಸಿ, ಜಾತಿವಾರು ಹಾಗೂ ಪ್ರಾಬಲ್ಯವಾರು ಸಮಾನತೆ ತರಲು ಪ್ರಯತ್ನಿಸಿತ್ತು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಪ್ರಬಲವಾಗಿರುವ ಸಮುದಾಯಕ್ಕೆ ನೀಡಿದರೆ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಈಗಿರುವ ಲಿಂಗಾಯತ ಸಮುದಾಯದ ನಾಯಕ ಈಶ್ವರ್ ಕಂಡ್ರೆ ಅವರನ್ನೇ ಮುಂದುವರಿಸಬೇಕು, ಇನ್ನೊಂದೆಡೆ ಪ್ರತಿಪಕ್ಷದ ನಾಯಕ ಸ್ಥಾನ ವನ್ನು ಸಿದ್ದರಾಮಯ್ಯಗೆ ನೀಡಿದರೆ, ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಹಿರಿಯ ಲಿಂಗಾಯತ ಸಮುದಾಯದ ನಾಯಕರಾದ ಎಚ್.ಕೆ ಪಾಟೀಲ್ ಇಲ್ಲವೇ ಹಿಂದುಳಿದ ಸಮುದಾಯದಿಂದ ಬಂದಿರುವ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ಗೆ ನೀಡಲು ಚಿಂತನೆ ನಡೆಸಲಾಗಿತ್ತು. ಆದರೆ ಸಿದ್ದರಾಮಯ್ಯ ಎಲ್ಲಾ ಸ್ಥಾನವು ತಮ್ಮ ಆಪ್ತರ ಬಳಿಯೇ ಇರಲಿ ಎಂದು ಪ್ರಯತ್ನ ನಡೆಸಿದ್ದರು. ರಾಜ್ಯ ಕಾಂಗ್ರೆಸ್ ನಲ್ಲಿ ಅತ್ಯಂತ ಪ್ರಬಲ ನಾಯಕರಾಗಿ ಹೊರಹೊಮ್ಮಿರುವ ಸಿದ್ದರಾಮಯ್ಯ ಮಾತನ್ನು ತೆಗೆದು ಹಾಕಲಾಗದೆ ಕಾಂಗ್ರೆಸ್ ಹೈಕಮಾಂಡ್ ಸಂದಿಗ್ಧ ಸ್ಥಿತಿಗೆ ತಲುಪಿದೆ. ಸಿದ್ದರಾಮಯ್ಯ ಬೇಡಿಕೆಗೆ ಮನ್ನಣೆ ಸಿಗುತ್ತದೆಯೋ ಅಥವಾ ತನ್ನದೇ ಆದ ಕಠಿಣ ನಿರ್ಧಾರವನ್ನು ಪಕ್ಷ ಕೈಗೊಳ್ಳುತ್ತದೋ ಎನ್ನುವುದನ್ನು ತಿಳಿದು ಬರಬೇಕಿದೆ.