ಬೆಂಗಳೂರು: ಭಾರತ ಚೀನಾ ಫ್ರೆಂಡ್‌ಶಿಪ್ ಅಸೋಸಿಯೇಷನ್ ಕರ್ನಾಟಕ (ಐಸಿಎಫ್‌ಎ-ಕೆ) ಸೆಮಿನಾರ್‌ನಲ್ಲಿ ಭಾಗವಹಿಸಲು ನಿರಾಕರಿಸಿರುವುದಾಗಿ ಕಾಂಗ್ರೆಸ್ ಹಿರಿಯ ನಾಯಕ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ಧಾಂತಿಕವಾಗಿ ನನ್ನ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ಧವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದಿದ್ದಾರೆ.
ಬಿಜೆಪಿಯಿಂದ ಟ್ವೀಟ್ ಟೀಕೆ:ಸಿದ್ದರಾಮಯ್ಯ ಹೇಳಿಕೆಯನ್ನು ಪ್ರಸ್ತಾಪಿಸಿ ಸರಣಿ ಟ್ವಿಟ್ ಮಾಡಿರುವ ಬಿಜೆಪಿ, ಚೀನಾ ಜೊತೆಗಿನ ಗಡಿ ಸಮಸ್ಯೆ ಪ್ರಸ್ತಾಪಿಸುವ ರಾಹುಲ್ ಗಾಂಧಿ ಅವರಿಗೆ ತಮ್ಮದೇ ಪಕ್ಷದ ನಾಯಕರು ಭಾರತ ಚೀನಾ ಫ್ರೆಂಡ್‌ಶಿಪ್ ಅಸೋಸಿಯೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದೆ.
ಅಲ್ಲದೇ, ಟೀಕೆಗಳು ಕೇಳಿ ಬರುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನನ್ನ ಅನುಮತಿ ಇಲ್ಲದೆಯೇ ಹೆಸರು ಹಾಕಿದ್ದಾರೆ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಇದು ಹೇಗೆ ಸಾಧ್ಯ?. ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರು, ಮಾಜಿ ಸಚಿವರೇ ಪ್ರಮುಖ ಆಹ್ವಾನಿತರಾಗಿರುವ ಈ ಕಾರ್ಯಕ್ರಮ ಕೆಪಿಸಿಸಿ ವತಿಯಿಂದಲೇ ಆಯೋಜನೆಗೊಂಡಿದ್ದೆ ಎಂದೂ ಬಿಜೆಪಿ ಕೇಳಿದೆ.
ಏನಿದು ವಿವಾದ?: ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಯುಎಸ್ ಸಾಮ್ರಾಜ್ಯಶಾಹಿಯ ಹಸ್ತಕ್ಷೇಪ ಮತ್ತು ಚೀನಾದ ಛಾಯಾಚಿತ್ರ ಪ್ರದರ್ಶನದ ವಿಷಯದೊಂದಿಗೆ ತೈವಾನ್ ಕುರಿತು ಸೆಮಿನಾರ್ಗೆ ಮಾಜಿ ಮುಖ್ಯಮಂತ್ರಿಯ ಹೆಸರನ್ನು ಮುಖ್ಯ ಅತಿಥಿಯಾಗಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಆಹ್ವಾನಿತರನ್ನಾಗಿ ಸೇರಿಸಿ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿತ್ತು.
ಇದಕ್ಕೆ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕಂಡು ಆಶ್ಚರ್ಯವಾಯಿತು ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಇತ್ತ, ಟೀಕೆಗಳು ಕೇಳಿ ಬರುತ್ತಿದ್ದಂತೆ ನನ್ನ ಅನುಮತಿ ಇಲ್ಲದೆಯೇ ಹೆಸರು ಹಾಕಿದ್ದಾರೆ ಎಂದು ಹೇಳಿ ಸಿದ್ದರಾಮಯ್ಯ ಕೈ ತೊಳೆದುಕೊಂಡಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಇದನ್ನೂ ಓದಿ:ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ವಿಷಾದನೀಯ ಬೆಳವಣಿಗೆ: ಸಿದ್ದರಾಮಯ್ಯ