ಬೆಂಗಳೂರು:ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವೀಣಾ ವಾದನ ನುಡಿಸುವಂತೆ ಆಹ್ವಾನಿಸಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಲಿದೆ. ನನ್ನ ವೀಣಾ ವಾದನ ಶ್ರೀರಾಮನಿಗೆ ಸಮರ್ಪಣೆಯಾಗಲಿದೆ ಎಂದು ವೀಣಾ ವಾದಕಿ ಶುಭಾ ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕುರಿತು ಮಾಹಿತಿ ನೀಡಿದ ಅವರು, ಅಯ್ಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಮಂದಿರದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ವೇಳೆ ವೀಣಾವಾದನ ನುಡಿಸಲು ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ವೃತ್ತಿಯೇ ವೀಣಾ ವಾದನ ನುಡಿಸುವುದಾಗಿದ್ದರೂ ಬೇರೆ ಬೇರೆ ದಿನದಲ್ಲಿ ನುಡಿಸುವುದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ನುಡಿಸುವುದಕ್ಕಿಂತ ಜನವರಿ 22ರಂದು ವೀಣಾ ವಾದನ ನುಡಿಸುವುದು ವಿಭಿನ್ನವಾಗಿದೆ. ಅಂದು ರಾಮನಿಗೆ ನನ್ನ ವೀಣಾ ವಾದನ ಸಮರ್ಪಣೆ ಆಗಲಿದೆ. ಹಾಗಾಗಿ ನನಗೆ ಇದು ವಿಶೇಷ ಅನುಭವ ಆಗಲಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
ಕಳೆದ ಮೂರ್ನಾಲ್ಕು ವಾರಗಳ ಹಿಂದೆ ನನಗೆ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಪರವಾಗಿ ಕೇಂದ್ರದಿಂದ ದೂರವಾಣಿ ಕರೆ ಬಂದಿತ್ತು. ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವೀಣಾ ವಾದನ ನುಡಿಸುವಂತೆ ಆಹ್ವಾನಿಸಲಾಯಿತು. ಅದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಈ ಆಹ್ವಾನ ಸಿಕ್ಕಿದ್ದು ನನಗೆ ತುಂಬಾ ಸಂತೋಷ ತಂದಿದೆ ಎಂದರು.