ಬೆಂಗಳೂರು:ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4,787 ಮಂದಿಯನ್ನು ನೈಋತ್ಯ ರೈಲ್ವೆ ಇಲಾಖೆಯ 4 ಶ್ರಮಿಕ್ ಸ್ಪೆಷಲ್ ರೈಲುಗಳು ಸುರಕ್ಷಿತವಾಗಿ ಮನೆ ಸೇರಿಸಿವೆ.
ಸಾವಿರಾರು ಮಂದಿಯನ್ನು ಮರಳಿ ಮನೆ ಸೇರಿಸಿದ ‘ಶ್ರಮಿಕ್ ಸ್ಪೆಷಲ್’ ರೈಲು - lockdown effect
ರೈಲ್ವೆ ಇಲಾಖೆಯು ‘ಶ್ರಮಿಕ್ ಸ್ಪೆಷಲ್’ ಎಂಬ ಹೆಸರಿನಲ್ಲಿ ರೈಲು ಸೇವೆ ಆರಂಭಿಸಿದ್ದು, ರಾಜ್ಯ ಸರ್ಕಾರದ ಮನವಿ ಮೇರೆಗೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4,787 ಮಂದಿಯನ್ನು ಸುರಕ್ಷಿತವಾಗಿ ಮನೆಗೆ ಸೇರಿಸಲಾಗಿದೆ.
ಮೊದಲ ರೈಲು ಬೆಂಗಳೂರಿನ ಚಿಕ್ಕಬಾಣಾವರದಿಂದ ಬೆಳಗ್ಗೆ 9.26 ಕ್ಕೆ ಒಡಿಶಾದ ಭುವನೇಶ್ವರಕ್ಕೆ 1,190 ಪ್ರಯಾಣಿಕರನ್ನು, ಎರಡನೇ ರೈಲು ಕೋಲಾರದ ಮಾಲೂರಿನಿಂದ ಮಧ್ಯಾಹ್ನ 2.35ಕ್ಕೆ ಬಿಹಾರದ ದಾನಾಪುರಕ್ಕೆ 1,200 ಪ್ರಯಾಣಿಕರನ್ನು, ಮೂರನೇ ರೈಲು ಬೆಂಗಳೂರಿನಿಂದ ಸಂಜೆ 5.25ಕ್ಕೆ ಜಾರ್ಖಂಡ್‌ನ ಹಟಿಯಾಗೆ 1,200 ಮಂದಿ ಪ್ರಯಾಣಿಕರನ್ನು ಹಾಗೂ ನಾಲ್ಕನೇ ರೈಲು ಮತ್ತೆ ಮಾಲೂರಿನಿಂದ ಸಂಜೆ 7.35ಕ್ಕೆ ಬಿಹಾರದ ದಾನಾಪುರಕ್ಕೆ 1,200 ಪ್ರಯಾಣಿಕರನ್ನು ಹೊತ್ತು ಸಾಗಿದೆ.
ವಿಶೇಷ ರೈಲಿನ ಒಂದು ಬೋಗಿಯಲ್ಲಿ 54 ಮಂದಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಪ್ರಯಾಣಿಕರಿಗೆ ಊಟ, ಕುಡಿಯುವ ನೀರನ್ನು ಸರ್ಕಾರ ತನ್ನ ವೆಚ್ಚದಲ್ಲೇ ಪೂರೈಸುತ್ತಿದೆ. ಇನ್ನು, ರೈಲು ಹೊರಟಾಗ ಪ್ಲಾಟ್‍ಫಾರಂ ನಲ್ಲಿ ಆರ್ಪಿಎಫ್ ಪೊಲೀಸರು ಸಾಲಾಗಿ ನಿಂತು ಚಪ್ಪಾಳೆ ತಟ್ಟುತ್ತಾ ಶುಭ ಕೋರಿದರು.