ಬೆಂಗಳೂರು: ಶಿವಮೊಗ್ಗದ ಹುಣಸೋಡು ವ್ಯಾಪ್ತಿಯ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆದಿದ್ದ ಸ್ಫೋಟ ಪ್ರಕರಣ ಸಂಬಂಧ ಪೂರ್ವ ವಲಯ ಐಜಿಪಿ ಸೂಚನೆ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಶಿವಮೊಗ್ಗ ಸಿಇಎನ್ (ಸೈಬರ್ ಕ್ರೈಂ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳು) ಠಾಣಾ ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಲ್ಲದೇ, ಪ್ರಕರಣ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಮುಂದಿನ ತನಿಖೆ ನಡೆಸಿ, ಕಾನೂನು ಪ್ರಕಾರ ಆರೋಪ ಪಟ್ಟಿಯನ್ನು ಸಲ್ಲಿಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ತಮ್ಮ ವಿರುದ್ಧ ಪ್ರಕರಣ ಹಾಗೂ ಈ ಸಂಬಂಧ ಸಿಇಎನ್ ಪೊಲೀಸರು ಸಲ್ಲಿಸಿದ್ದ, ಸಲ್ಲಿಕೆಯಾಗಿರುವ ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಸುಪ್ರೀಂ ಟ್ರೇಡರ್ಸ್ ಮಾಲೀಕ ಆಂಧ್ರಪ್ರದೇಶದ ಅನಂತಪುರದ ಮಂಜುನಾಥ ಸಾಯಿ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಸ್ಫೋಟಕ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆಯನ್ನು ಸಿಇಎನ್ ಪೊಲೀಸರಿಗೆ ವರ್ಗಾವಣೆ ಮಾಡುವ ಅಧಿಕಾರವು ಡಿಜಿ, ಐಜಿಪಿ, ರಾಜ್ಯ ಸರ್ಕಾರ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳನ್ನು ಹೊರತುಪಡಿಸಿ ಇತರರಿಗೆ ಇರುವುದಿಲ್ಲ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಪೂರ್ವವಲಯದ ಐಜಿಪಿ ಪ್ರಕರಣವನ್ನು ಸಿಇಎನ್ ಪೊಲೀಸರಿಗೆ ವರ್ಗಾವಣೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ದೋಷಾರೋಪ ಪಟ್ಟಿ ರದ್ದುಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ.
ಜೊತೆಗೆ, ಸಿಇಎನ್ ಪೊಲೀಸ್ ಠಾಣೆಗೆ ಭಾರತೀಯ ದಂಡ ಸಂಹಿತೆ 420, 409, 468, 467, 471, 498 (ಎ - ಇ)ವರೆಗಿನ ಅಪರಾಧಗಳು ಹಾಗೂ 25 ಲಕ್ಷಗಳವರೆಗಿನ ಮೊತ್ತಕ್ಕೆ ಸಂಬಂಧಿಸಿದಂತೆ ಮಾತ್ರ ತನಿಖೆ ಮಾಡುವುದಕ್ಕೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ಪ್ರಸ್ತುತ ಪ್ರಕರಣ ಐಪಿಸಿ 266, 304, 201, ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಸಿಇಎನ್ ಪೊಲೀಸರು ತನಿಖೆ ಮಾಡಿ ಆರೋಪ ಪಟ್ಟಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.