ಬೆಂಗಳೂರು:ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾರು ರಾಜೀನಾಮೆ ಕೊಡ್ತಾರೆ ಎಂದು ನಮಗೆ ಗೊತ್ತಿಲ್ಲ. ಹೆಚ್.ವಿಶ್ವನಾಥ್ ಅವರು ಹೋಗಲಿ, ಗೋಪಾಲಯ್ಯನವರಾದರೂ ಹೋಗಲಿ. ಯಾವ ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೆ ಎಂಬುದು ಗೊತ್ತಾಗಲ್ಲ. ಅವರವರ ಇಚ್ಛೆ. ಈ ಬೆಳವಣಿಗೆ ಏಕಾಯಿತು ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ, ದೇಶದಲ್ಲಿ ಅಸ್ಥಿರತೆ ಮಾಡುವ ಯತ್ನ ನಡೆಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಅತಂತ್ರತೆಗೆ ಯಾರ್ಯಾರು ಕಾರಣವೋ ಅದರ ಪ್ರತಿಫಲವನ್ನು ಅವರೇ ಅನುಭವಿಸುತ್ತಾರೆ. ರಾಜಕೀಯದಲ್ಲಿ ಸ್ಥಿರತೆ ಇಲ್ಲ. ಮಧ್ಯಂತರ ಚುನಾವಣೆಗೆ ರಾಜೀನಾಮೆ ಕೊಟ್ಟವರು ಹೋಗ್ತಾರೆ ಎಂದು ನನಗೆ ಅನಿಸುವುದಿಲ್ಲ ಎಂದರು.
ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ನನಗೆ ಯಾರೂ ಆಫರ್ ಕೊಟ್ಟಿಲ್ಲ. ಒಟ್ಟಿನಲ್ಲಿ ಇದು ಒಳ್ಳೆ ಬೆಳವಣಿಗೆ ಅಲ್ಲ. ಇನ್ನು ಮುಂದೆ 113 ಶಾಸಕರಿಗೂ ಮಂತ್ರಿಗಿರಿ ಕೊಟ್ಟರೆ ಸರ್ಕಾರ ಉಳಿಯಬಹುದು. ಬರೇ 33 ಶಾಸಕರನ್ನು ಮಾಡುವುದು ತಪ್ಪು ಎಂದು ಇದೇ ವೇಳೆ ಅಭಿಪ್ರಾಯಪಟ್ಟರು. ನಾನು ಪಕ್ಷದಲ್ಲೇ ಇರುತ್ತೇನೆ. ಪಕ್ಷದಿಂದ ಗೆದ್ದಿದ್ದೇವೆ. ಪಕ್ಷ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.