ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದನ್ನು ಖಂಡಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇಡಿ ಅವ್ರು ಡಿ.ಕೆ. ಶಿವಕುಮಾರ್ ಅವರನ್ನ ಬಂಧಿಸಿದ್ದಾರೆ. ಆಸ್ಪತ್ರೆಗೆ ಮೆಡಿಕಲ್ ಚೆಕಪ್ ಮಾಡಿಸಲು ಹೋಗಿದ್ದರು. ಶಿವಕುಮಾರ್ ಅವರನ್ನು ಬಂಧಿಸಿರುವುದು ನನಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಡಿ ಕ್ರಮಕ್ಕೆ ಮಾಜಿ ಪ್ರಧಾನಿ ಬೇಸರ ಡಿಕೆಶಿಗೆ ಅರ್ಜಿ ಹೈಕೋರ್ಟ್ನಲ್ಲಿ ತಿರಸ್ಕೃತಗೊಂಡ ಬಳಿಕ ಇಡಿ ನೋಟಿಸ್ ನೀಡಿತ್ತು. ಡಿಕೆಶಿ ನೊಟೀಸ್ಗೆ ಬೆಲೆ ಕೊಟ್ಟು ದೆಹಲಿಗೆ ಹೋದ್ರು. ಸತತ ನಾಲ್ಕು ದಿನಗಳ ಕಾಲ ಇಡಿ ವಿಚಾರಣೆಗೆ ಅವರು ಸಹಕಾರ ನೀಡಿದ್ದಾರೆ. ಇಡಿ ಅವರು ಕೇಳಿದ ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಎಂದರು.
ಶಿವಕುಮಾರ್ ತಂದೆ ಕಾರ್ಯಕ್ಕೆ ಅವಕಾಶ ಕೊಡದೇ ಇರೋದು ಅಮಾನುಷ ನಡೆ. ಪಿತೃ ಪಕ್ಷ ಮಾಡಲು ಸಹ ಬಿಟ್ಟಿಲ್ಲ. ತಂದೆ ಕಾರ್ಯ ಮಾಡಲು ಅವಕಾಶ ಕೇಳಿದ್ರೂ ಇಡಿ ಅವಕಾಶ ಕೊಟ್ಟಿಲ್ಲ. ವಿಚಾರಣೆಗೆ ಸಹಕರಿಸಿಲ್ಲವೆಂದು ಬಂಧಿಸಿರೋದು ಎಷ್ಟು ಸಮಂಜಸ ಎಂದು ಹೆಚ್ಡಿಡಿ ಪ್ರಶ್ನಿಸಿದ್ದಾರೆ.
ನಮ್ಮ ಮೈತ್ರಿ ಪಕ್ಷದ ಶಾಸಕರನ್ನು ಬಿಜೆಪಿ ಅವರು ಕರೆದುಕೊಂಡು ಹೋದಾಗ ವಿಧಾನಸಭೆಯಲ್ಲಿ ಬಿಜೆಪಿಯ ವಿರುದ್ಧ ಮುಕ್ತವಾಗಿ ಡಿಕೆಶಿ ಮಾತನಾಡಿದ್ರು. ಆ ಮಾತುಗಳು ಇಂದು ಡಿ.ಕೆ.ಗೆ ಮುಳವಾಗಿರಬಹುದು. ಕೋರ್ಟ್ನಲ್ಲಿ ನ್ಯಾಯ ಸಿಗುವ ಸಾಧ್ಯತೆಯಿದೆ. ಶಿವಕುಮಾರ್ ಕೋರ್ಟ್ನಲ್ಲಿ ಹೋರಾಟ ಮಾಡುತ್ತಾರೆ. ಅಲ್ಲದೆ ಅವರು ಕಾನೂನು ಹೋರಾಟದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ದೇವೇಗೌಡರು ವ್ಯಕ್ತಪಡಿಸಿದ್ರು.
ಸಮ್ಮಿಶ್ರ ಸರ್ಕಾರ ಇದ್ದಾಗಲೂ ಅನೇಕ ಬಾರಿ ಡಿಕೆಶಿ ಮೇಲೆ ಐಟಿ ದಾಳಿ ನಡೆದಿತ್ತು. ಆಪರೇಷನ್ ಬಗ್ಗೆ ಬಹಿರಂಗವಾಗಿ ಡಿಕೆಶಿ ಮಾತಾಡಿದ್ರು, ಹೀಗೆ ಮಾತಾಡಿದ್ದು ದೇಶ ಆಳೋರಿಗೆ ಇರಿಟೇಷನ್ ಆಗಿರಬಹುದು. ಅದಕ್ಕೆ ಎರಡು ವರ್ಷ ಆದ ಮೇಲೆ ಈಗ ಬಂಧಿಸಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಪರೋಕ್ಷವಾಗಿ ದೇವೇಗೌಡರು ಗುಡುಗಿದ್ರು.
ಅಲ್ಲದೆ ಡಿಕೆಶಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆ ಉಪ್ಪು-ತಿಂದವರು ನೀರು ಕುಡಿಯಬೇಕು ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡ್ರು ಬಿಜೆಪಿ ನಾಯಕರ ಹೇಳಿಕೆಗೆ ನಾನು ಉತ್ತರ ಕೊಡೊಲ್ಲ ಎಂದರು.