ಬೆಂಗಳೂರು:ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷಾ ವರದಿಯಲ್ಲಿ ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುವ ರಾಜ್ಯ ಸರ್ಕಾರದ ಆದೇಶ ಮಾಡಿತ್ತು.
ಆದರೆ, ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುವ ಬಗ್ಗೆ ಕೆಲವು ಮಠದ ಸ್ವಾಮೀಜಿಗಳು ಧಾರ್ಮಿಕತೆ, ನಂಬಿಕೆಯ ಹೆಸರಿನಲ್ಲಿ ಸರ್ಕಾರದ ಆದೇಶವನ್ನು ವಾಪಸ್ ಪಡೆಯಬೇಕೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಎಸ್ಎಫ್ ಐ ಆಗ್ರಹಿಸಿದೆ.
ಎಸ್ಎಫ್ಐನಿಂದ ಧರಣಿ
ಮೊಟ್ಟೆ ತಿನ್ನುವುದು ಹಾಗೂ ತಿನ್ನದಿರುವುದನ್ನು ಮಕ್ಕಳ ಆಯ್ಕೆಯಾಗಿದೆ. ಇದನ್ನೇ ತಿನ್ನಬೇಕು, ಇದನ್ನು ತಿನ್ನಬಾರದೆಂದು ಹೇಳುವ ಹಕ್ಕು ಸ್ವಾಮೀಜಿಗಳಿಗಿಲ್ಲ ಎಂದು ಎಸ್ಎಫ್ಐ ಹೇಳಿದೆ. ಸ್ವಾಮೀಜಿಗಳ ಧೋರಣೆ ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರು.