ಕರ್ನಾಟಕ

karnataka

ETV Bharat / state

ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು - ಲೈಂಗಿಕ ದೌರ್ಜನ್ಯ

ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕಾಲೇಜೊಂದರ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ
ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ

By ETV Bharat Karnataka Team

Published : Nov 24, 2023, 3:20 PM IST

ಬೆಂಗಳೂರು: ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಕಾಲೇಜು‌ ಪ್ರಾಂಶುಪಾಲರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಕಾಲೇಜೊಂದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಬಾಲಕಿಯನ್ನ ಕೊಠಡಿಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿರುವ‌ ಆರೋಪದಡಿ‌ 40 ವರ್ಷ ವಯಸ್ಸಿನ ಕಾಲೇಜು ಪ್ರಾಂಶುಪಾಲರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು:ಇಂಟರ್ನಲ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದ ಹಿನ್ನೆಲೆಯಲ್ಲಿ ನವೆಂಬರ್ 22ರಂದು ವಿದ್ಯಾರ್ಥಿನಿಯನ್ನ ಆರೋಪಿಯು ತನ್ನ ಕೊಠಡಿಗೆ ಕರೆದಿದ್ದರು ಎನ್ನಲಾಗಿದೆ. ಬಳಿಕ ಹೆಚ್ಚು ಅಂಕಗಳನ್ನ ನೀಡುವುದು ತನ್ನ ಕೈಯಲ್ಲಿದೆ ಎನ್ನುತ್ತಾ ಅಸಭ್ಯವಾಗಿ ಸ್ಪರ್ಶಿಸಲಾರಂಭಿಸಿದ್ದರು. ಆರೋಪಿಯ ಕೃತ್ಯವನ್ನ ಪ್ರತಿರೋಧಿಸಿದ್ದ ಬಾಲಕಿ ಅಲ್ಲಿಂದ ಓಡಿಹೋಗಿದ್ದು, ನಂತರ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಪೋಷಕರು ನೀಡಿರುವ ದೂರಿನನ್ವಯ ಆರೋಪಿ ಪ್ರಾಂಶುಪಾಲನ ವಿರುದ್ಧ ಐಪಿಸಿ ಸೆಕ್ಷನ್ 354 ಹಾಗೂ ಪೋಕ್ಸೋ ಕಾಯ್ದೆಯ ಸಂಬಂಧಪಟ್ಟ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ವರ್ಷ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ:ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕನನ್ನ ಜಯನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೆಂಬರ್ 22ರಂದು ಬಾಲಕಿಯ ತಾಯಿ ಅಂಗಡಿಗೆ ಹೋಗಿದ್ದಾಗ ಚಾಕೊಲೇಟ್ ಆಸೆ ತೋರಿಸಿದ್ದ ಆರೋಪಿಯು ಬಾಲಕಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಸ್ಥಳೀಯರು‌ ಗಮನಿಸಿದಾಗ ಸ್ಥಳದಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಆರೋಪಿ ವಿರುದ್ಧ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಪ್ರಾಚಾರ್ಯರಿಂದಲೇ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ದೂರು ದಾಖಲು

ಇತ್ತೀಚಿನ ಘಟನೆಗಳು:ರಾಯಚೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಗೆ ಅಂಕ ಮತ್ತು ಉಚಿತ ದಾಖಲಾತಿ ನೀಡುವುದಾಗಿ ಆಸೆ ತೋರಿಸಿ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಪ್ರಾಂಶುಪಾಲರನ್ನು ಶಕ್ತಿನಗರ ಪೊಲೀಸರು ಬಂಧಿಸಿದ್ದರು.

ಶಕ್ತಿನಗರದ ಶಾಲೆಯೊಂದರ ಪ್ರಾಂಶುಪಾಲ ವಿರುದ್ಧ ಸಂತ್ರಸ್ತ ವಿದ್ಯಾರ್ಥಿನಿ, ನನ್ನ ಜೊತೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದರು. ಆಗಾಗ್ಗೆ ತಮ್ಮ ಕೊಠಡಿಗೆ ಕರೆದು ಅಸಭ್ಯವಾಗಿ ವರ್ತಿಸುವುದು, ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದು, ವಾಟ್ಸ್‌ಆ್ಯಪ್​ನಲ್ಲಿ ಅಸಭ್ಯ ಪದಗಳಿಂದ ಚಾಟಿಂಗ್ ಮಾಡುತ್ತಿದ್ದರು.

ಒಂದು ದಿನ ಮಧ್ಯಾಹ್ನದ ವೇಳೆ ಶಾಲೆಯ ಚೇಂಬರ್​ಗೆ ನನ್ನನ್ನು ಕರೆಸಿ ನೀನು ನನಗೆ ಸಹಕರಿಸು, ಒಳ್ಳೆಯ ಅಂಕ ನೀಡುತ್ತೇನೆ. ಮುಂದಿನ ವಿದ್ಯಾಭ್ಯಾಸಕ್ಕೆ ಒಳ್ಳೆಯ ಕಾಲೇಜಿಗೆ ಯಾವುದೇ ಫೀಸ್ ಇಲ್ಲದೇ ಅಡ್ಮಿಶನ್ ಕೊಡಿಸಿ ಸೇರಿಸುತ್ತೇನೆ ಎಂದು ಹೇಳಿದ್ದರು ಎಂದು ಆರೋಪಿಸಿದ ವಿದ್ಯಾರ್ಥಿನಿ ಶಕ್ತಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ABOUT THE AUTHOR

...view details