ಕರ್ನಾಟಕ

karnataka

ETV Bharat / state

Congress Guarantee: ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ : ಕೈಕೊಟ್ಟ ಸೇವಾ ಸಿಂಧು ಪೋರ್ಟಲ್ - Gruha Jyoti Scheme application open

ಗೃಹ ಜ್ಯೋತಿ ಯೋಜನೆ ಪಡೆಯಲು ಸೇವಾ ಸಿಂಧು ಪೋರ್ಟಲ್ ಸರ್ವರ್ ಡೌನ್ ಆದ ಕಾರಣ ಹಲವೆಡೆ ಅರ್ಜಿ ಸಲ್ಲಿಕೆ ಸಾಧ್ಯವಾಗಿಲ್ಲ.

seva-sindhu-portal-server-down-to-get-gruha-jyoti-scheme
ಇಂದಿನಿಂದ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ

By

Published : Jun 18, 2023, 3:46 PM IST

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಹುನಿರೀಕ್ಷಿತ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದೆ. ಹಲವೆಡೆ ಆದರೆ ಸೇವಾ ಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿ ಅರ್ಜಿ ಸಲ್ಲಿಕೆ ಸಾಧ್ಯವಾಗದೆ, ಹಲವರು ವಾಪಸ್​ ತೆರಳಿದ್ದಾರೆ.

ಜುಲೈ 1ರಿಂದ ಗೃಹ ಜ್ಯೋತಿ ಯೋಜನೆ ಜಾರಿ ಆಗಲಿದೆ. ಈ ಯೋಜನೆಯ ಲಾಭ ಪಡೆಯಲು ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಸ್ಕಾಂ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಸೂಚನೆ ನೀಡಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿತ್ತು.‌

ಸರ್ವರ್ ಫುಲ್ ಬ್ಯುಸಿ, ತಾಂತ್ರಿಕ ಸಮಸ್ಯೆ: ಬಹುತೇಕ ಎಲ್ಲಾ ಕಡೆ ಸರ್ವರ್ ಡೌನ್ ಆಗಿರುವುದರಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಕೆಲವೆಡೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ಬೆಸ್ಕಾಂ ಕಚೇರಿಗಳಿಗೆ ಅರ್ಜಿ ಹಿಡಿದು ಕಾದು ಕೂತರೂ ಸೇವಾ ಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿರುವುದರಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಬೆಳಗ್ಗೆಯಿಂದ ಕೆಲವೆಡೆ ಅರ್ಜಿ ಹಿಡಿದು ಕಾದು ಕೂತ ಸಾರ್ವಜನಿಕರು ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಕಾದು ಕಾದು ಸುಸ್ತಾಗಿ ಬಳಿಕ ವಾಪಸಾದ ಘಟನೆ ನಡೆಯಿತು.

ಇಂದು ಭಾನುವಾರ ರಜಾ ದಿನವಾದರೂ ನಾಡ ಕಚೇರಿ, ಬೆಸ್ಕಾಂ ಕಚೇರಿಗಳು ಅರ್ಜಿ ಸ್ವೀಕಾರಕ್ಕಾಗಿ ತೆರೆದಿದ್ದವು. ಆದರೆ ಬೆಳಗ್ಗೆ ಸೇವಾ ಸಿಂಧು ಸರ್ವರ್ ಫುಲ್ ಬ್ಯುಸಿ ಬರುತ್ತಿದೆ. ಆ ಮೂಲಕ ಗೃಹಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಕೆಯ ಆರಂಭಿಕ ದಿನವೇ ವಿಘ್ನ ಎದುರಾಗಿದೆ. ಪೋರ್ಟಲ್​​ ಓಪನ್ ಆದ ಕೆಲವೇ ಸಮಯದಲ್ಲಿ ಬಂದ್​ ಆಗಿದೆ. ಹಲವೆಡೆ ಮಧ್ಯಾಹ್ನದವರೆಗೂ ಕಾದು ಕುಳಿತ ಸಾರ್ವಜನಿಕರು ಬಳಿಕ ವಾಪಸ್​ ತೆರಳಿರುವ ಘಟನೆ ನಡೆಯಿತು. ವೆಬ್​ಸೈಟ್ ಓಪನ್ ಆದ ಕೆಲವೇ ಹೊತ್ತಲ್ಲಿ ಮತ್ತೆ ಕ್ಲೋಸ್ ಆಗುತ್ತಿದ್ದು, ತಾಂತ್ರಿಕ ಸಮಸ್ಯೆ ಎದುರಾಗಿದೆ. ಹಾಗಾಗಿ ಕೆಲ ತಾಂತ್ರಿಕ ದೋಷದಿಂದ ಇಂದು ಬಹುತೇಕ ಅರ್ಜಿ ಸ್ವೀಕಾರ ಸಾಧ್ಯವಾಗಿಲ್ಲ. ಈ ದೋಷ ನಿವಾರಣೆಗೆ ತಾಂತ್ರಿಕ ತಜ್ಞರು ಯತ್ನಿಸುತ್ತಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ ಹೇಗೆ? :ಗೃಹ ಜ್ಯೋತಿ ಯೋಜನೆಗಾಗಿ ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸೇವಾ ಸಿಂಧು ವೆಬ್‌ಸೈಟ್‌ ಮೂಲಕ ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್​ನಲ್ಲೂ ಅರ್ಜಿ ಸಲ್ಲಿಸಬಹುದು. ಜೊತೆಗೆ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾಮ ಪಂಚಾಯ್ತಿ ಕಚೇರಿ, ವಿದ್ಯುತ್​ ಕಚೇರಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್​ಆರ್ ನಂಬರ್, ಮೊಬೈಲ್ ಸಂಖ್ಯೆ ಅವಶ್ಯಕತೆ ಇದೆ. ಇನ್ನು ಬಾಡಿಗೆದಾರರಾಗಿದ್ದರೆ, ಮನೆ ಬಾಡಿಗೆ ಕರಾರು ಪತ್ರ, ಆಧಾರ್ ಕಾರ್ಡ್ ನೀಡಿ ಅರ್ಜಿ ಸಲ್ಲಿಸಬಹುದು. ಸಮಸ್ಯೆ ಇದ್ದರೆ ಮಾಹಿತಿಗಾಗಿ 1912 ಸಹಾಯವಾಣಿ ಸಂಖ್ಯೆಗೆ ಕಾಲ್‌ ಮಾಡಿ ಮಾಹಿತಿ ಪಡೆಯಬಹುದು.

ಬಾಡಿಗೆದಾರರಿಗೂ ಉಚಿತ ವಿದ್ಯುತ್ :ಬಾಡಿಗೆದಾರರಿಗೂ ಉಚಿತ ವಿದ್ಯುತ್ ಅನ್ವಯಿಸಲಿದೆ. ಅದಕ್ಕಾಗಿ ಅವರು ಬಾಡಿಗೆ ಕರಾರು, ಆರ್​​ಆರ್ ನಂಬರ್, ಬಾಡಿಗೆ ಮನೆ ವಿಳಾಸದ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು. ಇನ್ನು 200 ಯುನಿಟ್​​ಗಳ ಬಳಕೆಯ ಮಿತಿಯನ್ನು ಯಾವುದಾದರು ತಿಂಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್​ ಪಾವತಿಸಿ, ಯೋಜನೆಯಲ್ಲಿ ಮುಂದುವರೆಯಬಹುದು. ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರು ಸರಾಸರಿ ಬಳಕೆಯ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಈ ಯೋಜನೆ ಸೌಲಭ್ಯ ಲಭಿಸಲಿದೆ. ಬಹುಮಹಡಿ ಅಪಾರ್ಟ್ಮೆಂಟ್​​ಗಳಲ್ಲಿ ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್​​ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲಾ ಮನೆಗಳಿಗೆ ಈ ಯೋಜನೆ ಅನ್ವಯಿಸಲಿದೆ.

ಇದನ್ನೂ ಓದಿ:Congress Guaranty: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಸ್ವಲ್ಪ ವಿಳಂಬ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ABOUT THE AUTHOR

...view details