ಬೆಂಗಳೂರು :ನಾಳೆಯಿಂದ ರಾಜ್ಯ ವಿಧಾನಸಭೆ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದ್ದರೂ ಸಹ ಈವರೆಗೆ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ರಾಜ್ಯ ಘಟಕ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲು ವಿಫಲವಾಗಿದ್ದು, ಇದೀಗ ಆಯ್ಕೆ ಹೈಕಮಾಂಡ್ ಅಂಗಳ ತಲುಪಿದೆ. ಹಾಗಾಗಿ ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದು, ಇಂದು ರಾತ್ರಿಯೊಳಗೆ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕರ ಆಯ್ಕೆ ರಾಜ್ಯ ಬಿಜೆಪಿಗೆ ಕಗ್ಗಂಟಾಗಿದ್ದು, ಒಮ್ಮತದ ಆಯ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆಯ ಜವಾಬ್ದಾರಿಯನ್ನು ಹೈಕಮಾಂಡ್ ಗೆ ಬಿಟ್ಟಿದೆ. ಹೀಗಾಗಿ ಇಂದು ದೆಹಲಿಗೆ ಯಡಿಯೂರಪ್ಪ ತೆರಳಿದ್ದು, ಪಕ್ಷದ ರಾಷ್ಟ್ರೀಯ ನಾಯಕ ಜೆ ಪಿ ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಸಭೆ ನಡೆಸಲಿದ್ದಾರೆ. ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗು ಕೇಂದ್ರ ಚುನಾವಣಾ ಸಮಿತಿ ಸದಸ್ಯರೂ ಆಗಿರುವ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ವರಿಷ್ಠರೇ ದೆಹಲಿಗೆ ಕರೆಸಿಕೊಂಡಿದ್ದು ಯಡಿಯೂರಪ್ಪ ಅಭಿಪ್ರಾಯವನ್ನೂ ಪರಿಗಣಿಸಿ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲಾಗುತ್ತದೆ.
ವಿ. ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಆರ್. ಅಶೋಕ್, ಅಶ್ವತ್ಥನಾರಾಯಣ್, ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್ ಹೀಗೆ ಹಲವಾರು ಹೆಸರುಗಳು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿಬಂದಿವೆ. ಪರಿಷತ್ ಸ್ಥಾನಕ್ಕೂ ಕೋಟ ಶ್ರೀನಿವಾಸ ಪೂಜಾರಿ ಮತ್ತೊಮ್ಮೆ ಅವಕಾಶದ ನಿರೀಕ್ಷೆಯಲ್ಲಿದ್ದು, ಶಶಿಲ್ ನಮೋಶಿ ಬೇಡಿಕೆ ಇಟ್ಟಿದ್ದಾರೆ. ಇಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಇದರಿಂದ ಒಮ್ಮತದಿಂದ ಆಯ್ಕೆ ಮಾಡಲು ರಾಜ್ಯ ಘಟಕಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಹೈಕಮಾಂಡ್ ಅಂಗಳಕ್ಕೆ ಆಯ್ಕೆ ಜವಾಬ್ದಾರಿಯನ್ನು ವಹಿಸಿದೆ.
ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭದಾಯಕವಾಗುವಂತಹ ಸಂಘಟನಾ ಚತುರ ಹಾಗು ವಾಗ್ಮಿಯನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ದೆಹಲಿಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಅಂತಿಮಗೊಳ್ಳಲಿದ್ದು, ನಾಳೆ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ವಿಧಾನಸಭಾಧ್ಯಕ್ಷರಿಗೆ ಪ್ರತಿಪಕ್ಷ ನಾಯಕನ ಹೆಸರನ್ನು ಕಳುಹಿಸಿಕೊಡಲಿದ್ದಾರೆ. ಅದೇ ರೀತಿ ಪರಿಷತ್ ಪ್ರತಿಪಕ್ಷ ನಾಯಕರ ಹೆಸರನ್ನೂ ಸಭಾಪತಿಗೆ ಕಳುಹಿಸಿಕೊಡಲಿದ್ದಾರೆ.