ಬೆಂಗಳೂರು: ದೇಶದ ವಿವಿಧ ಭಾಗಗಳಿಂದ ಕೆಲಸ ಅರಸಿ ನಗರಕ್ಕೆ ಬಂದು ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸಕ್ಕೆ ಸೇರಿಕೊಂಡು ಕಾಲಕ್ರಮೇಣ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ.
ಮನೆ - ಕಚೇರಿ ಕಾಯಬೇಕಾದ ಭದ್ರತಾ ಸಿಬ್ಬಂದಿಗಳೇ ಖದೀಮರಾಗುತ್ತಿದ್ದಾರೆ. ಮತ್ತೊಂದೆಡೆ ಕಮೀಷನ್ ಆಸೆಗಾಗಿ ಸೆಕ್ಯೂರಿಟಿ ಏಜೆನ್ಸಿಗಳು ಉದ್ಯೋಗಿಗಳ ಪೂರ್ವಚಾರಿತ್ರ್ಯ ಪ್ರಮಾಣಪತ್ರ ಸೇರಿದಂತೆ ಸೂಕ್ತ ದಾಖಲಾತಿ ಪಡೆದುಕೊಳ್ಳದೇ ಕೆಲಸಕ್ಕೆ ನೇಮಿಸುತ್ತಿವೆ. ಇದು ಸೆಕ್ಯೂರಿಟಿ ಗಾರ್ಡ್ಗಳು ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗಲು ಪ್ರಮುಖ ಕಾರಣವಾಗುತ್ತಿದೆ.
ಕಾನೂನು ಗಾಳಿಗೆ ತೂರುತ್ತಿವೆ:ಬಿಹಾರ, ಉತ್ತರಪ್ರದೇಶ, ರಾಜಸ್ತಾನ ಸೇರಿ ಈಶಾನ್ಯ ಭಾಗದ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಅಪಾರ್ಟ್ಮೆಂಟ್, ಕಂಪೆನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸೆಕ್ಯೂರಿಟಿ ಏಜೆನ್ಸಿಗಳು ಪಾಲಿಸಬೇಕಾದ ಕಾನೂನು ಗಾಳಿಗೆ ತೂರುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಕೆಲಸಕ್ಕೆ ಸೇರಿಕೊಳ್ಳುವ ಮುನ್ನ ಉದ್ಯೋಗಿಯ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಪೊಲೀಸರಿಂದ ವೇರಿಫಿಕೇಷನ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಆದರೆ, ಬಹುತೇಕ ಏಜೆನ್ಸಿಗಳು ಕಂಪೆನಿಗಳಿಂದ ಹೆಚ್ಚುವರಿ ಹಣ ಪಡೆದು ವ್ಯಕ್ತಿಯ ಹಿನ್ನೆಲೆ ತಿಳಿದುಕೊಳ್ಳದೆ ಕಡಿಮೆ ವೇತನ ನಿಗದಿಪಡಿಸಿ ಸೆಕ್ಯೂರಿಟಿಗಳಾಗಿ ನಿಯೋಜಿಸುತ್ತಿವೆ. ಕಡಿಮೆ ಸಂಬಳ ಪಡೆಯುವ ಸೆಕ್ಯೂರಿಟಿಗಳು ಹಣದಾಸೆಗಾಗಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಬಿ. ಎಂ ಶಶಿಧರ್ ಅವರು ಮಾತನಾಡಿರುವುದು ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ವಲಸೆ ಕಾರ್ಮಿಕರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಹೌಸ್ ಕೀಪಿಂಗ್, ಸೆಕ್ಯೂರಿಟಿ ಕೆಲಸಗಳಲ್ಲಿ ಹೆಚ್ಚಿನ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಕಡಿಮೆ ಸಂಬಳಕ್ಕಾಗಿ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ ಅಂದುಕೊಂಡು ಕೆಲಸದವರ ಪೂರ್ವಾಪರ ತಿಳಿದುಕೊಳ್ಳದೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಕೆಲಸಕ್ಕೆ ಸೇರಿಸಿಕೊಂಡು ಭವಿಷ್ಯದಲ್ಲಾಗುವ ಅಪಾಯಕ್ಕೆ ತಾವೇ ಆಹ್ವಾನಿಸಿಕೊಳ್ಳುತ್ತಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ಭಾಗಿ: ತಮ್ಮ ಕೆಲಸಕ್ಕಾಗಿ ಸ್ಥಳೀಯರನ್ನು ಇಟ್ಟುಕೊಂಡರೆ ಅವರಿಗೆ ವೇತನ ಹೆಚ್ಚಳ ಸೇರಿದಂತೆ ಹಲವು ರೀತಿಯ ಡಿಮ್ಯಾಂಡ್ ಮಾಡುತ್ತಾರೆ ಎಂಬ ಮನೋಭಾವ ಬಹುತೇಕ ಮಾಲೀಕರಲ್ಲಿದೆ. ಹೀಗಾಗಿ, ಹೊರರಾಜ್ಯದವರಿಗೆ ಕೆಲಸಕ್ಕೆ ನೇಮಕಾತಿ ಮಾಡಿಕೊಂಡರೆ ಕಡಿಮೆ ಸಂಬಳಕ್ಕೂ ಬರುತ್ತಾರೆ. ಅಲ್ಲದೆ ಯಾವುದೇ ರೀತಿಯ ಗೊಡವೆಗಳಿರುವುದಿಲ್ಲ ಎಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ, ಹಲವು ಮಾಲೀಕರು ಊರು, ವಿಳಾಸ ಅರಿಯದೆ ಕೆಲಸ ಕೊಡುತ್ತಿದ್ದಾರೆ. ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳುವ ಕೆಲವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
ರಾಜ್ಯದಲ್ಲಿ ಸುಮಾರು 2,500ಕ್ಕೂ ಹೆಚ್ಚು ಸೆಕ್ಯೂರಿಟಿ ಏಜೆನ್ಸಿಗಳಿವೆ. ಈ ಪೈಕಿ ಅರ್ಧದಷ್ಟು ಏಜೆನ್ಸಿಗಳು ಪರವಾನಗಿ ಪಡೆದುಕೊಂಡಿಲ್ಲ. ಸದ್ಯ ಕರ್ನಾಟಕದಲ್ಲಿ ಅಂದಾಜು 2.50 ಲಕ್ಷ ಸೆಕ್ಯೂರಿಟಿಗಳಿದ್ದು, ಇದರಲ್ಲಿ ಅರ್ಧದಷ್ಟು ಭದ್ರತಾ ಸಿಬ್ಬಂದಿ ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಸುರಕ್ಷತಾ ಸಂಸ್ಥೆಗಳ ನಿಯಂತ್ರಣ ಕಾಯ್ದೆ 2005ರ ಪ್ರಕಾರ, ಏಜೆನ್ಸಿ ತೆರೆಯಬೇಕಾದರೆ ಗೃಹ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು.
ಅನಧಿಕೃತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಯೂರಿಟಿ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಗೊತ್ತು-ಗುರಿ ಇಲ್ಲದವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿರುವುದರಿಂದ ಕೆಲ ಉದ್ಯೋಗಿಗಳು ಕ್ರೈಂಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ ಪರವಾನಗಿ ಪಡೆದುಕೊಳ್ಳದ ಅನಧಿಕೃತ ಏಜೆನ್ಸಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕರ್ನಾಟಕ ಸೆಕ್ಯೂರಿಟಿ ಸರ್ವೀಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬಿ. ಎಂ ಶಶಿಧರ್.
ಹೆಚ್ಚಾಯ್ತು ಸೆಕ್ಯೂರಿಟಿ ಗಾರ್ಡ್ಗಳಿಂದ ಕ್ರೈಂ..
ಕೆಲಸ ಅರಸಿಕೊಂಡು ರಾಜಧಾನಿಗೆ ಎಂಟ್ರಿ ಕೊಟ್ಟು ಸೆಕ್ಯೂರಿಟಿಗಳಾಗಿ ಕೆಲಸ ಮಾಡುವ ಇವರು ಕಾಲಕ್ರಮೇಣ ದುಡ್ಡಿನ ಆಸೆಗಾಗಿ ಅಥವಾ ಮೋಜು ಜೀವನಕ್ಕಾಗಿ ಕಳ್ಳತನ ಸೇರಿದಂತೆ ಇನ್ನಿತರ ಕೃತ್ಯಗಳಲ್ಲಿ ಇಳಿಯುತ್ತಿದ್ದಾರೆ. ಹಾಗಾದರೆ, ಸೆಕ್ಯೂರಿಟಿ ಗಾರ್ಡ್ಗಳು ಎಸಗಿರುವ ಅಪರಾಧಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
- ಐಷಾರಾಮಿ ಜೀವನಕ್ಕಾಗಿ 35ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್ ಶ್ರೀನಿವಾಸ್ನನ್ನ ಜುಲೈ 13 ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದರು.
- ಜುಲೈ 6ರಂದು ಜೆ. ಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಮಾಲೀಕನ ತಾಯಿಯ ಕೈಕಾಲು ಕಟ್ಟಿ ಆರೋಪಿಗಳು ಚಿನ್ನಾಭರಣ, ಹಣ ದೋಚಿದ್ದರು. ಸೆಕ್ಯೂರಿಟಿಗಳಾಗಿ ಸೇರಿ ಕೃತ್ಯ ಎಸಗಿದ್ದ ನೇಪಾಳ ಮೂಲದ ಪ್ರತಾಪ್ ಸಿಂಗ್ ಸೋನು ದಂಪತಿ ಬಂಧನವಾಗಿತ್ತು.
- ಕಳೆದ ಜುಲೈ 5ರಂದು ಕಳ್ಳನೆಂದು ವ್ಯಕ್ತಿಗೆ ರಾಡ್ನಿಂದ ಹೊಡೆದು ಕೊಲೆ. ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ನಿಂದ ಕೃತ್ಯ ಎಸಗಲಾಗಿತ್ತು. ಹೆಚ್ಎಎಲ್ ಪೊಲೀಸರಿಂದ ಬಂಧನವಾಗಿತ್ತು.
- ಬಾಲಕನನ್ನ ಕಿಡ್ನ್ಯಾಪ್ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಸೆಕ್ಯುರಿಟಿ ಗಾರ್ಡ್ ನೇಪಾಳ ಮೂಲದ ಗೌರವ್ ಸಿಂಗ್ ಸೇರಿ ಮೂವರನ್ನು ಕಳೆದ ಜೂನ್ ನಲ್ಲಿ ಹೆಣ್ಣೂರು ಪೊಲೀಸರು ಬಂಧಿಸಿದ್ದರು.
ಓದಿ:ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ