ಬೆಂಗಳೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವನ್ನು ನ್ಯಾಯ ಮಂಡಳಿಯಂತೆ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸರ್ಕಾರಿ ನೌಕರ ಸಿದ್ಧಲಿಂಗಸ್ವಾಮಿ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿ ನೌಕರರಾದ ಎಂ.ಬಿ.ಸಿದ್ಧಲಿಂಗಸ್ವಾಮಿ ಅಧೀಕ್ಷಕರಾಗಿ 2012ರಲ್ಲಿ ಬಡ್ತಿ ಹೊಂದಿದ್ದರು. ಕೆ.ಆರ್.ಮುರುಳೀದರ್ ಅವರು 2015ರಲ್ಲಿ ಬಡ್ತಿ ಹೊಂದಿದ್ದರು. ಈ ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಬಡ್ತಿ ವಿಚಾರದಲ್ಲಿ ವಿವಾದವಿತ್ತು. ಈ ಕುರಿತು ಮುರುಳೀಧರ್ ಎಸ್‌ಸಿ/ಎಸ್‌ಟಿ ಆಯೋಗಕ್ಕೆ ಅರ್ಜಿ ಸಲ್ಲಿಸಿ, ತಮಗೆ ಸಿದ್ಧಲಿಂಗಸ್ವಾಮಿ ಅವರಿಗಿಂತ ಹೆಚ್ಚಿನ ಸೇವಾ ಹಿರಿತನವಿದೆ. ಅದರ ಆಧಾರದ ಮೇಲೆ ತಮಗೆ ಎಲ್ಲಾ ಸೌಲಭ್ಯ ಕೊಡಿಸಲು ಆದೇಶಿಸುವಂತೆ ಕೋರಿದ್ದರು. ವಿಚಾರಣೆ ನಡೆಸಿದ್ದ ಆಯೋಗ, ಮುಳೀಧರ್ ಅವರಿಗೆ 2012ರಿಂದ ಜಾರಿಗೆ ಬರುವಂತೆ ಎಲ್ಲಾ ಸೇವಾ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ 2016ರಲ್ಲಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸಿದ್ಧಲಿಂಗಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.