ಕರ್ನಾಟಕ

karnataka

By

Published : Oct 19, 2019, 12:55 PM IST

ETV Bharat / state

ಸಾವರ್ಕರ್ ವಿಚಾರವಾಗಿ ಸಿದ್ದರಾಮಯ್ಯ-ಸಿ.ಟಿ. ರವಿ ನಡುವೆ ಟ್ವೀಟ್‌ ವಾರ್

ವಿನಾಯಕ ದಾಮೋದರ್ ಸಾವರ್ಕರ್ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಿ.ಟಿ. ರವಿ ನಡುವೆ ಟ್ವಿಟರ್ ವಾರ್​ ನಡೆದಿದೆ.

ಸಾವರ್ಕರ್ ವಿಚಾರವಾಗಿ ಸಿದ್ದರಾಮಯ್ಯ-ಸಿ.ಟಿ. ರವಿ ನಡುವೆ ಟ್ವಿಟರ್ ವಾರ್

ಬೆಂಗಳೂರು:ಹಿಂದುತ್ವದ ಪ್ರತಿಪಾದಕ ವಿನಾಯಕ ದಾಮೋದರ ಸಾವರ್ಕರ್ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಿ.ಟಿ. ರವಿ ನಡುವೆ ಟ್ವಿಟರ್ ಕದನ ಆರಂಭವಾಗಿದೆ.

ನಿನ್ನೆ ಟ್ವೀಟ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಸಾವರ್ಕರ್ ಅವರಿಗೆ 'ಭಾರತ ರತ್ನ' ಆ ಮೇಲೆ ಕೊಡುವಿರಂತೆ. ಮೊದಲು ಸಾಮಾಜಿಕ ಸೇವೆಗಾಗಿ ತನ್ನ ಬದುಕನ್ನು ತೇದು ಲಿಂಗೈಕ್ಯವಾಗಿರುವ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತರತ್ನ ನೀಡಿ. ಕನಿಷ್ಠ ಈ ಒಂದು ಭರವಸೆಯನ್ನಾದರೂ ಈಡೇರಿಸಿ ಎಂದು ಸಲಹೆ ನೀಡಿದ್ದರು.

ಇದಕ್ಕೆ ಟ್ವಿಟರ್​ನಲ್ಲೇ ಇಂದು ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ. ರವಿ, ಮಹಾತ್ಮ ಗಾಂಧಿಯವರ ಹತ್ಯೆ ವಿಚಾರದಲ್ಲಿ ರಾಷ್ಟ್ರೀಯವಾದಿ ವೀರ್ ಸಾವರ್ಕರ್ ಅವರನ್ನು ಸಂಚುಕೋರ ಎಂದು ಆರೋಪಿಸಿದ್ದೀರಿ. ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಂಡ ನಂತರ ನೀವು ಮಾನಸಿಕವಾಗಿ ಅಂಗವಿಕಲರಾಗಿದ್ದೀರಾ? ನಿಮಗೆ ಇತಿಹಾಸದ ಬಗ್ಗೆ ಏನಾದರೂ ಕಲ್ಪನೆ ಇದೆಯೇ? ನೀವು ಸೆಲ್ಯುಲಾರ್ ಜೈಲಿಗೆ ಏಕೆ ಭೇಟಿ ನೀಡಬಾರದು! ನಿಮ್ಮ ಪ್ರವಾಸಕ್ಕೆ ನಾನು ಪ್ರಾಯೋಜಕತ್ವ ನೀಡುತ್ತೇನೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂದು ಚಾಟಿ ಬೀಸಿದ್ದಾರೆ.

ಈ ಟ್ವಿಟರ್ ವಾರ್ ಇನ್ನಷ್ಟು ಮುಂದುವರಿಯುವ ಲಕ್ಷಣ ಗೋಚರಿಸಿದ್ದು, ಸಿ.ಟಿ. ರವಿ ಇದಕ್ಕೆ ಯಾವ ರೀತಿ ಟಾಂಗ್ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ABOUT THE AUTHOR

...view details