ಬೆಂಗಳೂರು :ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದ್ದು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದೆ ಅಲ್ಲದೇ ಆಡಳಿತದಲ್ಲಿ ಬಿಎಎಸ್ವೈ ಪುತ್ರನ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಹೈಕಮಾಂಡ್ ಗಮನಕ್ಕೆ ತರುವ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ.
ಮಂತ್ರಿ ಮಂಡಲ ರಚನೆ, ಖಾತೆ ಹಂಚಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದ ಬಿ.ಎಲ್ ಸಂತೋಷ್ ಇದೀಗ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲೂ ಸಿಎಂ ಕೈ ಕಟ್ಟಿಹಾಕಲು ಹೊರಟಿದ್ದಾರೆ.
ಹಿಂದಿನ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿತ್ತು ಎಂದು ನಾವೇ ಆರೋಪ ಮಾಡಿದ್ದೆವು. ಆದರೆ ಈಗ ನಮ್ಮ ಸರ್ಕಾರದಲ್ಲೇ ಅಧಿಕಾರಿಗಳ ವರ್ಗಾವಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಏಕಾಏಕಿ ಅಧಿಕಾರಿಗಳ ದೊಡ್ಡ ಮಟ್ಟದ ವರ್ಗಾವಣೆ, ಕೆಲ ವರ್ಗಾವಣೆ ಹಿಂಪಡೆಯುವುದು, ಎರಡೆರಡು ಪೋಸ್ಟಿಂಗ್ ನೀಡುವುದು ನಡೆಯುತ್ತಿದೆ. ಈ ವಿಷಯ ಪ್ರತಿಪಕ್ಷಗಳ ಆಹಾರಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವರ್ಗಾವಣೆ ವಿರುದ್ಧ ಹೇಳಿಕೆ ನೀಡುತ್ತಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಹೈಕಮಾಂಡ್ ಗೆ ಮಾಹಿತಿ ನೀಡಿದ್ದಾರೆ.
ಇದರ ಜೊತೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿಎಎಸ್ವೈ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧವೂ ದೂರು ನೀಡಿದ್ದಾರೆ. ವರ್ಗಾವಣೆ ವಿಷಯದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಪಕ್ಷದಲ್ಲಿ ಅಸಮಧಾನದ ಹೊಗೆ ಏಳಲಿದೆ. ಸಿಎಂ ಆಡಳಿತದಲ್ಲಿ ವಿಜಯೇಂದ್ರ ನೇರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೈಕಮಾಂಡ್ ಗೆ ಮಾಹಿತಿ ನೀಡಿದ್ದಾರೆ.