ಬೆಂಗಳೂರು:ಇಂದು ನಟ ಸಂಚಾರಿ ವಿಜಯ್ ಅವರ 38 ನೇ ವರ್ಷದ ಹುಟ್ಟುಹಬ್ಬ. ತಮ್ಮ ಸರಳತೆ, ಅಭಿನಯದಿಂದಲೇ ಜನರ ಮನ ಗೆದ್ದಿದ್ದ ನಟ ಇತ್ತೀಚೆಗಷ್ಟೇ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟರು. ಅಂಗಾಂಗ ದಾನ ಮಾಡಿ ಏಳು ಜನರ ಜೀವ ಉಳಿಸಿದ ವಿಜಯ್, ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ವಿಜಯ್ ನೆನಪಿಗಾಗಿ ಅವರ ಸ್ನೇಹ ಬಳಗ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.
ಪಿರಂಗಿಪುರದ ಪೋಸ್ಟರ್, ವಿಡಿಯೋ ರಿಲೀಸ್
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಾವಿಗೂ ಮುನ್ನ ಐದಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಈ ಸಿನಿಮಾಗಳ ಸಾಲಿನಲ್ಲಿ ವಿಜಯ್ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ಪಿರಂಗಿಪುರ ಕೂಡ ಒಂದು. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಪಾತ್ರ ಪರಿಚಯದ ಬಗ್ಗೆ, ಒಂದು ವಿಡಿಯೋ ಮತ್ತು ಪೋಸ್ಟರ್ ಅನ್ನು ಅನಾವರಣ ಮಾಡಲು ಪಿರಂಗಿಪುರ ಚಿತ್ರತಂಡ ಸಿದ್ಧತೆ ನಡೆಸಿದೆ.
ಲಂಕೆ ಚಿತ್ರದ ಪೋಸ್ಟರ್ ಬಿಡುಗಡೆ
ಸಂಚಾರಿ ಬದುಕಿದ್ದರೆ ಇಂದು ತಮ್ಮ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈ ಪ್ರಯುಕ್ತ ವಿಜಯ್ ಅಭಿನಯದ 'ಲಂಕೆ' ಸಿನಿಮಾದ ಪೋಸ್ಟರ್ನ್ನು ಚಿತ್ರತಂಡ ರಿಲೀಸ್ ಮಾಡಿದೆ.
'ಅನಂತವಾಗಿರು' ಸಂಚಾರಿ
ಸಂಚಾರಿ ವಿಜಯ್ ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲಾಗುತ್ತಿದೆ.
ಇದೊಂದು ಬಯೋಗ್ರಫಿ ಮಾದರಿಯಲ್ಲಿ ರೂಪುಗೊಂಡಿರುವ ಪುಸ್ತಕ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದರೆ, ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು ನೆನಪಿಸಿಕೊಂಡಿದ್ದಾರೆ.