ಬೆಂಗಳೂರು :ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.
ಶಾಸಕ ಯತ್ನಾಳ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ.. ಯತ್ನಾಳ್ ಕಚೇರಿ ತೆರಳಿ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದ ಕಾರ್ಯಕರ್ತರನ್ನು ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಠಾಣೆಗೆ ಸಲೀಂ ಅಹ್ಮದ್ ಅವರು ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರ ಮಾತುಗಳು ಅವರ ವ್ಯಕ್ತಿತ್ವ ಹಾಗೂ ಬಿಜೆಪಿಯ ಮನಸ್ಥಿತಿಯನ್ನು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ರವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಭವನದಲ್ಲಿ ಪ್ರತಿಭಟಿಸಿ ಪೋಸ್ಟರ್ ಅಂಟಿಸಲು ಮುಂದಾಗಿದ್ದರು. ಹೀಗಾಗಿ, ವಿಧಾನಸೌಧ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ದಸ್ತಗಿರಿ ಮಾಡಿದ್ದರು. ಹೀಗಾಗಿ, ನಾವೆಲ್ಲರೂ ಹೋಗಿ ನಮ್ಮ ಕಾರ್ಯಕರ್ತರನ್ನು ಬಿಡಿಸಿಕೊಂಡು ಬಂದಿದ್ದೇವೆ ಎಂದರು.
ಯತ್ನಾಳ್ ಅವರ ಹೇಳಿಕೆ ವಿಚಾರವಾಗಿ ನಿನ್ನೆ ನಮ್ಮ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದಾರೆ. ಪ್ರತಿಭಟನೆ ಮಾಡಿದವರ ವಿರುದ್ಧ ಈ ರೀತಿ ಕ್ರಮಕೈಗೊಂಡಿರುವ ಸರ್ಕಾರ, ಅವಹೇಳನಕಾರಿ ಹೇಳಿಕೆ ಕೊಟ್ಟವರ ವಿರುದ್ಧವೂ ಕ್ರಮಕೈಗೊಳ್ಳಬೇಕು. ಇಂತಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಓದಿ: ಯತ್ನಾಳ್ ವಿರುದ್ಧ ಪೋಸ್ಟರ್ ಅಂಟಿಸಿ ನಮ್ಮ ಕಾರ್ಯಕರ್ತರು ಒಳ್ಳೆ ಕೆಲಸ ಮಾಡಿದ್ದಾರೆ: ಡಿಕೆಶಿ