ಚಿಕ್ಕಬಳ್ಳಾಪುರ:ಸಾಮಾಜಿಕ ಉದ್ದೇಶದಿಂದ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟ್ವಿ-20 ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಒನ್ ವರ್ಲ್ಡ್ ತಂಡ ವಿಜೇತವಾಗಿದೆ. ಇಲ್ಲಿನ ಸಾಯಿಕೃಷ್ಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಸಚಿನ್ ನಾಯಕತ್ವದ ತಂಡವು ಒನ್ ಫ್ಯಾಮಿಲಿ ತಂಡ ನೀಡಿದ್ದ 182 ರನ್ಗಳ ಗುರಿಯನ್ನು ಇನ್ನೂ ಒಂದು ಎಸೆತ ಬಾಕಿಯಿರುವಂತೆ ಜಯಶಾಲಿಯಾಯಿತು. ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಇರುವಾಗ ಸ್ಟ್ರೈಕ್ನಲ್ಲಿದ್ದ ಇರ್ಫಾನ್ ಪಠಾಣ್ ಸಿಕ್ಸರ್ ಅಟ್ಟಿ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡವು ಬ್ಯಾಟಿಂಗ್ ಮಾಡಿ 181 ರನ್ಗಳ ಸ್ಪರ್ಧಾತಕ ಮೊತ್ತ ಕಲೆ ಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಡಾರೇನ್ ಮ್ಯಾಡಿ ಹಾಗೂ ರಮೇಶ್ ಕಲವಿತರಂಗ ಉತ್ತಮ ಆರಂಭ ಒದಗಿಸಿದರು. ತಂಡವು 39 ರನ್ ಗಳಿಸಿದ್ದಾಗ ರಮೇಶ್ ಔಟಾದರು. ಕ್ರೀಸ್ಗೆ ಇಳಿದ ಮೊಹಮ್ಮದ್ ಕೈಫ್ 8 ರನ್ ಗಳಿಸಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಇನ್ನೊಂದು ತುದಿಯಲ್ಲಿ ಡಾರೇನ್ ಮ್ಯಾಡಿ ಸೊಗಸಾದ ಅರ್ಧಶತಕ ಗಳಿಸಿ ಪೆವಿಲಿಯನ್ ಸೇರಿದರು. ಪಾರ್ಥಿವ್ ಪಟೇಲ್ (19) ಹೆಚ್ಚು ಒತ್ತು ನಿಲ್ಲಲಿಲ್ಲ. ಈ ವೇಳೆ, ಯುಸೂಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ರನ್ ಗತಿ ಹೆಚ್ಚಿಸಿದರು. ಯೂಸುಫ್ ಆಕರ್ಷಕ ಸಿಕ್ಸರ್ಗಳನ್ನ ಸಿಡಿದು 38 ರನ್ ಗಳಿಸಿ ಔಟಾದರೆ, ನಾಯಕ ಯುವರಾಜ್ ಸಿಂಗ್ 23 ರನ್ ಹೊಡೆದು ಅಶೋಕ್ ದಿಂಡಾ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.