ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತಿದ್ದರೂ, ಮತ್ತೊಂದು ಕಡೆ ರೂಪಾಂತರಿ ಸೋಂಕಿನ ಕಾಟ ಶುರುವಾಗಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಸೋಂಕು ಇಬ್ಬರಲ್ಲಿ ಪತ್ತೆಯಾಗಿದ್ದು, 600ಕ್ಕೂ ಹೆಚ್ಚು ಸ್ಯಾಂಪಲ್ಸ್ನ್ನು ಜಿನೋಮಿಕ್ ಸ್ವೀಕ್ಸಿಂಗ್ ಟೆಸ್ಟ್ಗೆ ಕಳುಹಿಸಲಾಗಿದೆ. ಅದರ ವರದಿ ಇಂದು ಬರಲಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಆಗುತ್ತಿರುವ ಆತಂಕ ನಮ್ಮ ರಾಜ್ಯದಲ್ಲಿ ಇಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ, ಕೇರಳ ಗಡಿಭಾಗದಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಅಲ್ಲಿನ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದು, ಅಲ್ಲಿಂದ ಬರುವ ಜನರಿಗೆ ರ್ಯಾಂಡಮ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಕೋವಿಡ್ ಲಸಿಕೆ ಪಡೆಯದೇ ಇದ್ದರೆ ತೀವ್ರ ಪರಿಣಾಮ:
ಕೋವಿಡ್ ಲಸಿಕೆ ಪಡೆಯದೇ ಇದ್ದರೆ ಕೋವಿಡ್ನ ಯಾವುದೇ ತಳಿಯಾದರೂ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ, ಪ್ರತಿಯೊಬ್ಬರು ಲಸಿಕೆ ತೆಗೆದುಕೊಳ್ಳಬೇಕು. ಎರಡು ಡೋಸ್ ಲಸಿಕೆ ಪೂರ್ಣವಾಗುವವರೆಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಸಮುದಾಯದಲ್ಲಿ ಶೇ.70 ರಷ್ಟು ಲಸಿಕೆ ಪೂರ್ಣ ಆಗುವವರೆಗೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯಕ ಎಂದು ಸಲಹೆ ನೀಡಿದರು.