ಬೆಂಗಳೂರು: ಆರ್ಎಸ್ಎಸ್ನವರೇನು ಈ ದೇಶದವರೇ?. ಅವರೇನು ಮೂಲ ಭಾರತೀಯರಾ?. ನಾನು ಈಗ ಚರ್ಚೆ ಮಾಡಬಾರದು ಅಂದುಕೊಂಡಿದ್ದೇನೆ. ಅವರು ಹೊರಗಿನಿಂದ ಬಂದವರು. ಇವರು ದ್ರಾವಿಡರಾ?. 600 ವರ್ಷ ಮೊಘಲರು ಆಳ್ವಿಕೆ ಮಾಡಲು ಯಾರು ಕಾರಣ?. ನೀವೆಲ್ಲಾ ಒಟ್ಟಾಗಿ ಇದ್ದಿದ್ದರೇ ಅವರು ಬರುತ್ತಿದ್ದರಾ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರ್ಎಸ್ಎಸ್ ಮೂಲವನ್ನು ಕೆದಕಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಎಸ್ ಎಸ್ನವರು ಮೂಲ ಭಾರತೀಯರೇ?. ನಾನು ಅದನ್ನೆಲ್ಲಾ ಕೆದಕಬಾರದು ಅಂದುಕೊಂಡಿದ್ದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದ ಹಾಗೆ, ಮಧ್ಯಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ನಾನು ಈಗಾಗಲೇ ಇದರ ಬಗ್ಗೆ ಹೇಳಿದ್ದೇನೆ. ಶಾರುಕ್ ಖಾನ್ ದೇಶ ತೊರೆಯಬೇಕು ಅಂದಿದ್ದರು. ನಾನು ರಾಜನಾಥ್ ಸಿಂಗ್ಗೆ ಪ್ರಶ್ನೆ ಹಾಕಿದ್ದೆ. ಅವರು ಎಲ್ಲಿಗೆ ಹೋಗಬೇಕಪ್ಪ ಎಂದು. ನೀವು ಮಧ್ಯಪ್ರಾಚ್ಯದಿಂದ ಬಂದವರು ಎಂದಿದ್ದೆ ಎಂದು ತಿಳಿಸಿದರು.
ರೋಹಿತ್ ಚಕ್ರತೀರ್ಥನಿಗೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಪರಿಷ್ಕರಣೆ ಮಾಡಿ ಅಂತ ಕೊಟ್ಟಿದ್ರೆ, ಅವನು ಹೆಡಗೇವಾರ್ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಭಗತ್ ಸಿಂಗ್ ಪಾಠವನ್ನೇ ತೆಗೆದುಹಾಕಿದ್ದಾನೆ. ಚರಿತ್ರೆಯಿಂದ ನಾವು ಪಾಠ ಕಲಿಯಬೇಕು. ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.