ಬೆಂಗಳೂರು:ತಡರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯವರನ್ನು ಬೆದರಿಸಿ ದರೋಡೆ ಮಾಡಿರುವ ಘಟನೆ ಘಟನೆ ಕಾಮಾಕ್ಷಿಪಾಳ್ಯದ ಸಣ್ಣಕ್ಕಿಬೈಲ್ನಲ್ಲಿ ನಡೆದಿದೆ. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಚಾಕು ತೋರಿಸಿ ದ್ವಿಚಕ್ರ ವಾಹನ ದೋಚಿದ್ದವರ ಬಂಧನ ವೃತ್ತಿಯಲ್ಲಿ ಆಟೋ ಚಾಲಕಾಗಿರುವ ನಾಗೇಶ್ ಎಂಬಾತನ ಮನೆ ಬಳಿ ತಡರಾತ್ರಿ 1 ಗಂಟೆ ಸುಮಾರಿಗೆ ಮಾಸ್ಕ್ ಧರಿಸಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಮೂವರು ದರೋಡೆಕೋರರು, ಮನೆಯ ಬಾಗಿಲು ಬಡಿದಿದ್ದಾರೆ. ಮನೆಯವರು ಬಾಗಿಲು ತೆಗೆಯುತ್ತಿದ್ದಂತೆ ಒಳನುಗ್ಗಿ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಬಳಿಕ ಮನೆಯಲ್ಲಿದ್ದ 35 ಗ್ರಾಂ ಚಿನ್ನ, 30 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕು ತೋರಿಸಿ ದ್ವಿಚಕ್ರ ವಾಹನ ದೋಚಿದ್ದವರ ಬಂಧನ : ರಸ್ತೆಯಲ್ಲಿ ಸಾಗುತ್ತಿದ್ದವನನ್ನು ತಡೆದು ಆತನಿಗೆ ಚಾಕು ತೋರಿಸಿ ಬೆದರಿಸಿ ದ್ವಿಚಕ್ರ ವಾಹನ ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ಭಾರತೀನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರ ನಿವಾಸಿಗದ ಮೊಹಮ್ಮದ್ ಜಬಿ ಹಾಗೂ ಯಾಸೀನ್ ಖಾನ್ ಬಂಧಿತ ಆರೋಪಿಗಳು.
ಮೇ 21ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಭಾರತೀನಗರದ ನೇತಾಜಿ ರಸ್ತೆಯಲ್ಲಿ ಸಾಗುತ್ತಿದ್ದ ಮೊಹಮ್ಮದ್ ಶಂಶಾದ್ ಎಂಬುವನನ್ನು ತಡೆದಿದ್ದ ಆರೋಪಿಗಳು, ಆತನಿಗೆ ಚಾಕು ತೋರಿಸಿ ಬೆದರಿಸಿ ದ್ವಿಚಕ್ರ ವಾಹನ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಮೊಹಮ್ಮದ್ ಶಂಶಾದ್ ಅವರು ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನವಾಗಿದ್ದ 17 ದ್ವಿಚಕ್ರ ವಾಹನಗಳು ಎರಡು ಆಟೋ ರಿಕ್ಷಾ ಸೇರಿದಂತೆ 15 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದು ಮನೆಯೊಡತಿಯ ಸರ ಕಸಿದು ಪರಾರಿ :ಇಂದು ಬೆಳಗ್ಗೆ ಮಹಿಳೆಯರಿಬ್ಬರು ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದು ಒಂಟಿ ಮನೆ ಮಹಿಳೆ ತಲೆ ಹೊಡೆದು, ಬಳಿಕ ಸರ ಕಸಿದು ಪರಾರಿಯಾದ ಘಟನೆ ನಗರ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆಯ ಪಾರ್ವತಿ ನಗರದಲ್ಲಿ ನಡೆದಿದೆ. ಮನೆ ಮಾಲಕಿ ಶಾಂತಮ್ಮ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಕೋವಿಡ್ ನಿಂದ ಪತಿ ಸಾಪನ್ನಪ್ಪಿದ್ದ ಬಳಿಕ ಶಾಂತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಮನೆಯಲ್ಲಿದ್ದು ಜೀವನ ನಡೆಸುತ್ತಿದ್ದರು. ಇವರಿಗೆ ಸೇರಿದ ನಾಲ್ಕು ಬಾಡಿಗೆ ಮನೆಗಳ ಪೈಕಿ ಎರಡು ಮನೆಗಳು ಖಾಲಿ ಇತ್ತು. ಇಂದು ಮಧ್ಯಾಹ್ನ ಮನೆ ಬಳಿ ಇಬ್ಬರು ಮಹಿಳೆಯರು ಬಾಡಿಗೆಗೆ ಮನೆ ಕೇಳಿಕೊಂಡು ಬಂದಿದ್ದರು. ಮನೆ ತೋರಿಸಲು ಶಾಂತಮ್ಮ ಒಳ ಹೋದಾಗ ಅಲ್ಲಿಯೇ ಇದ್ದ ಕಟ್ಟಿಗೆ ತುಂಡುಗಳಿಂದ ಆಕೆಯ ತಲೆ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಶಾಂತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರ ಸರ ಕಸಿದು ಪರಾರಿಯಾಗಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಬಾಡಿಗೆಗೆ ಮನೆ ಕೇಳುವ ನೆಪ: ಮನೆಯೊಡತಿಯ ಸರ ದೋಚಿ ಪರಾರಿಯಾದ ಮಹಿಳೆಯರು