ಬೆಂಗಳೂರು: "ದೇಶದ ಜನತೆಯ ಹಕ್ಕುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನ್ಯಾಯಾಂಗ ಕ್ಷೇತ್ರದ ಮುಂದಿದ್ದು, ಇಡೀ ನ್ಯಾಯಾಂಗ ಕ್ಷೇತ್ರ ತ್ವರಿತ ನ್ಯಾಯದಾನದ ಮೂಲಕ ನಾಗರಿಕರ ರಕ್ಷಣೆ ಮಾಡಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ತಿಳಿಸಿದ್ದಾರೆ. 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಗುರುವಾರ ಹೈಕೋರ್ಟ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
"ಸಂವಿಧಾನದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೂಲಭೂತ ಅಂಶಗಳನ್ನು ರಕ್ಷಣೆ ಮಾಡುವುದು ನ್ಯಾಯಾಂಗ ವ್ಯವಸ್ಥೆಯ ಪ್ರಾಥಮಿಕ ಕರ್ತವ್ಯ. ಅವುಗಳನ್ನು ಈ ಕ್ಷೇತ್ರ ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ. ನಮ್ಮ ಸಂವಿಧಾನದಲ್ಲಿ ದೇಶದ ಜನತೆಯ ವೈವಿಧ್ಯತೆಯ ಅಗತ್ಯಗಳಿಗೆ ಪರಿಹಾರ ನೀಡಲಾಗಿದೆ. ಆ ಮೂಲಕ ಜನತೆಯನ್ನು ಒಗ್ಗೂಡಿಸುವ ಶಕ್ತಿ ಇದೆ. ಅಲ್ಲದೆ, ಮನುಕುಲದ ಘನತೆ ಎತ್ತಿ ಹಿಡಿಯಲಿದೆ ಮತ್ತು ಮಾನವನ ಮೌಲ್ಯಗಳ ಕಲ್ಪನೆಗಳು ಮತ್ತು ಆಧ್ಯಾತ್ಮಿಕ ಮಾನದಂಡಗಳನ್ನು ಗೌರವಿಸಲಿದೆ" ಎಂದು ಹೇಳಿದರು.
"ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ದೇಶಕ್ಕೆ ಅತ್ಯಮೂಲ್ಯವಾದ ಸಂವಿಧಾನ ಸಿಕ್ಕಿದೆ. ಇದರಲ್ಲಿರುವ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಲ್ಲಿ ಭಾರತ ದೇಶ ನಿರೀಕ್ಷೆ ಮೀರಿ ಸಾಧನೆ ಮಾಡಲು ನೆರವಾಗಲಿದೆ. ಹೀಗಾಗಿ ಕಾನೂನುಗಳಿಂದ ಸಂವಿಧಾನದ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ" ಎಂದು ತಿಳಿಸಿದರು.
ನ್ಯಾಯ ಎಲ್ಲರಿಗೂ ದೊರಕಬೇಕು: "ಸಾಮಾಜಿಕವಾಗಿ ಹಿಂದುಳಿದವರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ನ್ಯಾಯ ಲಭ್ಯವಾಗುವಂತೆ ಮಾಡಲು ನ್ಯಾಯಾಂಗ ಕ್ಷೇತ್ರ ಶ್ರಮಿಸಬೇಕಾಗಿದೆ. ಸಂವಿಧಾನದ ಮೂಲಕ ನಾಗರಿಕರಿಗೆ ಲಭ್ಯವಿರುವ ಎಲ್ಲ ಕಾನೂನುಗಳು ಎಲ್ಲರಿಗೂ ಲಭ್ಯವಾಗುವಂತಾಗಬೇಕು. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ನ್ಯಾಯ ಒದಗಿಸುವಂತಾಗಬೇಕು. ಸಂಪನ್ಮೂಲಗಳು ಮತ್ತು ಜ್ಞಾನದ ಕೊರತೆಯಿಂದ ಯಾವುದೇ ವ್ಯಕ್ತಿಗೆ ನ್ಯಾಯ ಲಭ್ಯವಾಗದಂತೆ ನೋಡಿಕೊಳ್ಳಬೇಕು" ಎಂದರು.