ಬೆಂಗಳೂರು: ಪಾದರಾಯನಪುರ ಗಲಾಟೆಗೆ ನೇರವಾಗಿ ಮಾಜಿ ಸಚಿವ ಜಮೀರ್ ಅಹಮದ್ ಕಾರಣ. ಇವರು ದೇಶದ್ರೋಹ ಧೋರಣೆ ತಾಳಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.
ಜಮೀರ್ ದೇಶದ್ರೋಹಿ, ರಾಜಕಾರಣಿಯಾಗಲು ಅನರ್ಹ: ರೇಣುಕಾಚಾರ್ಯ ವಾಗ್ದಾಳಿ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಜಮೀರ್ ಅಹ್ಮದ್ಗೆ ದೇಶದ ಸಂಸ್ಕೃತಿಯ ಅರಿವಿಲ್ಲ. ಅವರು ಪಾಕಿಸ್ತಾನ ಸಂಸ್ಕೃತಿ ಹಾಗೂ ವ್ಯಾಮೋಹ ಹೊಂದಿದ್ದಾರೆ ಅನಿಸುತ್ತದೆ. ಪಾದರಾಯನಪುರದ ಪುಂಡರು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲಿ ಅವರಿಗೆ ಬುದ್ಧಿವಾದ ಹೇಳುವ ಬದಲು ಬೆಂಬಲ ನೀಡಿ ಸಂಪೂರ್ಣವಾಗಿ ರಕ್ಷಿಸುವ ಕಾರ್ಯ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಪಾದರಾಯನಪುರ ಪುಂಡರಿಗೆ ಹಣಕಾಸಿನ ನೆರವಿನಿಂದ ಹಿಡಿದು ಅವರಿಗೆ ಜಾಮೀನು ಕೊಟ್ಟು ಜೈಲಿನಿಂದ ಹೊರ ತರುವವರೆಗೂ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಜೈಲಿಂದ ಆಚೆ ಬಂದಿರುವ ಪುಂಡರನ್ನು ಸ್ವಾಗತಿಸುವ ಕೆಟ್ಟ ಕೆಲಸ ಮಾಡಿದ್ದಾರೆ. ತಮ್ಮ ರಾಜಕೀಯ ನೆಲೆ ಭದ್ರ ಮಾಡಿಕೊಳ್ಳಲು ಇಂಥ ಪುಂಡರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಜಮೀರ್ ಶಾಸಕನಾಗಲು, ರಾಜಕಾರಣಿಯಾಗಲು ನಾಲಾಯಕ್. ನಾವು ಜನರಿಗೆ ಮಾದರಿಯಾಗಬೇಕು, ಜನರ ಬದುಕು ಕಟ್ಟಬೇಕು. ಆದರೆ ಅವರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ಶಾಸಕತ್ವ ಅನರ್ಹಗೊಳಿಸುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಜಮೀರ್ ಬುದ್ಧಿವಂತನಲ್ಲ ದಡ್ಡನೂ ಅಲ್ಲ. ಈತ ಅರೆದಡ್ಡ. ಅಥವಾ ಹಾಗೆ ನಡೆದುಕೊಳ್ಳುತ್ತಿದ್ದಾರೆ. ದೇಶದ್ರೋಹಿಗಳಿಗೆ ಬೆಂಬಲ ನೀಡುವ ಇವರು ಕೂಡ ದೇಶದ್ರೋಹಿ. ಕೊರೊನಾ ವಾರಿಯರ್ಸ್ಗೆ ಧೈರ್ಯ ತುಂಬುವ ಬದಲು ಪುಂಡರಿಗೆ ಬೆಂಬಲ ನೀಡುವ ಕಾರ್ಯ ಮಾಡುತ್ತಿದ್ದಾರೆ ರೇಣುಕಾಚಾರ್ಯ ಕಿಡಿಕಾರಿದರು.
ಗುಜರಿ ವ್ಯಾಪಾರ ಮಾಡಿ ಇಂತಹ ನಾಟಕ ಆಡುತ್ತಿದ್ದಾನೆ. ಕೊರೊನಾ ಪೀಡಿತರಿಗೆ ಆತ್ಮಸ್ಥೈರ್ಯ ತುಂಬುವ ಬದಲು ಗಲಾಟೆಕೋರರಿಗೆ ಬೆಂಬಲ ನೀಡುವ ಕಾರ್ಯ ಮಾಡುತ್ತಿದ್ದಾರೆ. ಇವರು ಶಾಸಕರಾಗಿ ಇರಲು ಅನರ್ಹರು. ವಜಾಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಜಮೀರ್ಗೆ ಕಾಂಗ್ರೆಸ್ ನಾಯಕರು ಬೆಂಬಲಿಸುವ ಮೂಲಕ ಖುದ್ದು ದೇಶದ್ರೋಹಕ್ಕೆ ಬೆಂಬಲ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.