ಬೆಂಗಳೂರು : ಜನಸಾಮಾನ್ಯರ ತೊಂದರೆ ನಿವಾರಣೆಗೆ ಯಶವಂತಪುರ ವಿಧಾನಸಭೆ ಕ್ಷೇತ್ರ 5, ಬ್ಯಾಟರಾಯನಪುರದ 2, ದಾಸರಹಳ್ಳಿ, ಆನೇಕಲ್, ಮಹದೇವಪುರ ಕ್ಷೇತ್ರದಲ್ಲಿನ ಕಸ ವಿಲೇವಾರಿ ಘಟಕಗಳನ್ನು ಬೆಂಗಳೂರಿನ ಹೊರಭಾಗದಲ್ಲಿ ಜನರಹಿತ ಬೆಟ್ಟ, ಗುಡ್ಡ ಪ್ರದೇಶಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿಂದು ಜಲಸಂಪನ್ಮೂಲ, ಅರಣ್ಯ ಇಲಾಖೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಸಮನ್ವಯ ಸಭೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಂದಾಯ ಹಾಗೂ ಅರಣ್ಯ ಇಲಾಖೆಗಳ ಜತೆ ಚರ್ಚಿಸಿ, ಪರ್ಯಾಯ ಜಾಗಗಳನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಅಪಾರವಾಗಿ ಬೆಳದ ಪರಿಣಾಮ ಕಸ ವಿಲೇವಾರಿ ಘಟಕಗಳು ನಗರದ ಹೃದಯ ಭಾಗಕ್ಕೆ ಬಂದಿವೆ. ಈ ಘಟಕಗಳ ಸುತ್ತಮುತ್ತ ನಾಲ್ಕೈದು ಕಿ.ಮೀ. ವರೆಗೆ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬ್ಯಾಟರಾಯಣಪುರ ಶಾಸಕ, ಸಚಿವ ಕೃಷ್ಣಬೈರೇಗೌಡ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮತ್ತಿತರರು ಅವರು ಕಸ ವಿಲೇವಾರಿ ಘಟಕ ಸ್ಥಳಾಂತರದ ವಿಚಾರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ನಾನು ಕೂಡ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದೆ. ಮುಂದಿನ ದಿನಗಳಲ್ಲಿ ಜನರಿಗೆ ಕಸದ ವಾಸನೆ ಬರಬಾರದು ಎಂಬ ಉದ್ದೇಶದಿಂದ ನಗರದ ಹೊರವಲಯಕ್ಕೆ ಈ ಘಟಕಗಳ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ. ಇದಕ್ಕಾಗಿ ನಗರದ ನಾಲ್ಕೂ ಮೂಲೆಗಳಲ್ಲಿ ಅರಣ್ಯ ಪ್ರದೇಶದ ಗಡಿ ಭಾಗಗಳಲ್ಲಿ 100 ಎಕರೆ ಜಾಗ ನೀಡಿ ಎಂದು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಿದ್ದು, ಸರ್ವೇ ಮಾಡಿದ ಬಳಿಕ ಜಾಗ ನೀಡಲಾಗುವುದು. ಪ್ರತಿಯಾಗಿ ನಾವು ಅರಣ್ಯ ಇಲಾಖೆಗೆ ಪರ್ಯಾಯ ಜಾಗ ನೀಡುತ್ತೇವೆ. ಅಥವಾ ಖರೀದಿ ಮಾಡುತ್ತೇವೆ ಎಂದು ವಿವರಿಸಿದರು.
ತಿಪ್ಪಗೊಂಡನಹಳ್ಳಿ ಬಫರ್ ಜೋನ್ ಪುನರ್‌ನಿಗದಿ:ತಿಪ್ಪಗೊಂಡನಹಳ್ಳಿ ನೀರು ಸ್ವಚ್ಛತೆ ಕಾಪಾಡಲು ನಾವು ಆ ಭಾಗದ ಶಾಸಕರ ಜೊತೆ ಚರ್ಚೆ ಮಾಡಿದ್ದೇವೆ. ಮುಂದಿನ ಒಂದೂವರೆ ವರ್ಷಗಳಲ್ಲಿ ನೀರನ್ನು ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ನೀರಿಗೆ ಯಾವುದೇ ಕೊಳಚೆ ನೀರು ಸೇರದಂತೆ ನೋಡಿಕೊಳ್ಳಬೇಕು. ಇಲ್ಲಿನ ಬಫರ್ ಜೋನ್ ಅಂತರ ಕಡಿಮೆ ವಿಚಾರವಾಗಿ 2017ರಲ್ಲಿ ಹಾಗೂ 2021ರಲ್ಲಿ ಸರ್ಕಾರ ಆದೇಶವಾಗಿದ್ದರೂ ನಗರಾಭಿವೃದ್ಧಿ ಇಲಾಖೆ ಮೂಲಕ ಜಾರಿ ಆಗದೆ ಯಾರಿಗೂ ಪ್ಲಾನ್ ಸ್ಯಾಂಕ್ಷನ್ ಮಾಡುತ್ತಿಲ್ಲ. ಇದರಿಂದಾಗಿ ಕಾನೂನು ಬಾಹೀರವಾಗಿ ಮನೆ, ಕಟ್ಟಡಗಳ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕಟ್ಟುನಿಟ್ಟಾಗಿ ಕಾನೂನು ಜಾರಿ ಮೂಲಕ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು.
ನೆಲಮಂಗಲ, ಡಾಬಸ್ ಪೇಟೆ, ಶಿವಗಂಗೆ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ಲಾನ್ಗಳಿಗೆ ಅನುಮತಿ ನೀಡುತ್ತಿಲ್ಲ ಎಂದು ಜನ ಗಲಾಟೆ ಮಾಡುತ್ತಿದ್ದಾರೆ. ಕಳೆದ ಸರ್ಕಾರ ತಂದಿರುವ ಕಾನೂನನ್ನೇ ಜಾರಿ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದು, ನಗರಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಾನೂನು ತಂಡ ಒಟ್ಟಾಗಿ ಕೂತು ಚರ್ಚೆ ಮಾಡಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದರು.
ತಿಪ್ಪಗೊಂಡನಹಳ್ಳಿಯಲ್ಲಿ 300 ಎಕರೆ ಹಾಗೂ ಹೆಸರಘಟ್ಟದಲ್ಲಿ 100 ಎಕರೆ ಜಮೀನು ಇದ್ದು, ಇಲ್ಲಿ ಬಿಡಬ್ಲ್ಯೂಎಸ್ಎಸ್ ಬಿಗೆ ಸ್ವಂತ ಸೌರ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದೇವೆ. ಇವರು ಈಗ ಯುನಿಟ್ ಗೆ 6 ರೂ.ನಂತೆ ಸಾವಿರ ಕೋಟಿಯಷ್ಟು ಬಿಲ್ ಕಟ್ಟುತ್ತಿದ್ದಾರೆ. ಸೌರ ವಿದ್ಯುತ್ ಘಟಕದಿಂದ ಯುನಿಟ್ ಗೆ 4 ರೂ. ನಂತೆ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದು. ಇದರಿಂದ ನಮ್ಮ ಜಮೀನನ್ನು ಒತ್ತುವರಿಯಿಂದ ಕಾಪಾಡಿಕೊಳ್ಳಬಹುದು, ಸೌರ ವಿದ್ಯುತ್ ಕೂಡ ಉತ್ಪಾದಿಸಬಹುದು. ಈ ವಿಷಯವನ್ನು ಮಾಲೀನ್ಯ ನಿಯಂತ್ರಣ ಮಂಡಳಿಗೆ ತಿಳಿಸಿದ್ದು, ಪರಿಶೀಲನೆ ಮಾಡಲಿದೆ ಎಂದು ಡಿಕೆಶಿ ಹೇಳಿದರು.
ಮೇಕೆದಾಟು ಯೋಜನೆಗೆ ಪರ್ಯಾಯ ಜಾಗ :ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಈ ಭಾಗದ ಜನರಿಗೆ ಪರ್ಯಾಯ ಜಾಗಗಳನ್ನು ಗುರುತಿಸಲಾಗಿದೆ. ಚಾಮರಾಜನಗರ, ಮಂಡ್ಯ, ರಾಮನಗರದಲ್ಲಿ ಜಾಗ ಗುರುತಿಸಲಾಗಿದ್ದು, ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಬಿಎಂಆರ್ ಡಿ ಯೋಜನೆಗಳಿಗೆ ಸಂಬಂಧಿಸಿದಂತೆ ನಮಗೂ ಹಾಗೂ ಅರಣ್ಯ ಇಲಾಖೆ ನಡುವಣ ಸಮಸ್ಯೆಗಳನ್ನು ಚರ್ಚೆ ಮಾಡಿದ್ದೇವೆ. ಕಾವೇರಿ ನೀರಿನ ಪೈಪ್ ಲೈನ್ 100 ಮೀಟರ್ ಅರಣ್ಯ ಜಾಗದಲ್ಲಿ ಬರುತ್ತಿದ್ದು, ಅದಕ್ಕೆ ಅರಣ್ಯ ಅವಕಾಶ ನೀಡುತ್ತಿಲ್ಲ. ಹೀಗಾಗಿ ಈ ಯೋಜನೆ ತಡೆಹಿಡಿಯಲಾಗಿದೆ. ಕಾಮಗಾರಿಗೆ ಅವಕಾಶ ನೀಡಿ ಇದಕ್ಕೆ ಪರ್ಯಾಯ ಜಾಗ ನೀಡುವುದಾಗಿ ತಿಳಿಸಲಾಗಿದೆ. ಬೆಂಗಳೂರಿನ ಸುತ್ತಮುತ್ತಲಲ್ಲಿ ಆನೆ ಮತ್ತು ಚಿರತೆ ದಾಳಿಗಳು ಹೆಚ್ಚಾಗುತ್ತಿವೆ. ಈ ವಿಚಾರವನ್ನು ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಡಿಕೆಶಿ ನುಡಿದರು.
ಒಟ್ಟು ಎಷ್ಟು ಜಾಗವನ್ನು ಅರಣ್ಯ ಇಲಾಖೆಯಿಂದ ಪಡೆಯಲಾಗುವುದು ಎಂದು ಕೇಳಿದಾಗ, ಪ್ರತಿಕ್ರಿಯಿಸಿದ ಡಿಕೆ ಶಿಕುಮಾರ್, ಇದಕ್ಕೆ ಸಂಬಂಧಿಸಿದ ದೊಡ್ಡ ಪಟ್ಟಿಯೇ ಇದೆ. 2003 ರಲ್ಲಿ 42 ಎಕರೆಯಷ್ಟು ಜಾಗದಲ್ಲಿ ಬಿಡಿಎ ಮೂಲಕ ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲಾಗಿದ್ದು, ಅನೇಕರು ಮನೆ ಕಟ್ಟಿಕೊಂಡಿದ್ದಾರೆ. ಬಿಡಬ್ಲ್ಯೂಎಸ್ಎಸ್ ಬಿ ಪೈಪ್ ಅಳವಡಿಸಲು ಮೂರ್ನಾಲ್ಕು ಎಕರೆ ಬೇಕಿದೆ. ಕೆಂಪೇಗೌಡ ಬಡಾವಣೆಗೆ ರಸ್ತೆ ಮಾಡಬೇಕಿದೆ, ಬನಶಂಕರಿ ಬಡಾವಣೆಯಲ್ಲಿ ಮನೆಗಳು ನಿರ್ಮಾಣವಾಗಿರುವ ಜಾಗವನ್ನು ನಮ್ಮದೆಂದು ಅರಣ್ಯ ಇಲಾಖೆ ತಿಳಿಸಿದೆ. ಬಫರ್ ಜೋನ್ ನಲ್ಲಿ ಮರ ಇಲ್ಲದಿದ್ದರೆ ಮನೆ ಕಟ್ಟಿಕೊಳ್ಳಲು ಎನ್ಒಸಿ ನೀಡುವುದಾಗಿ ಅರಣ್ಯ ಇಲಾಖೆ ಹೇಳಿದೆ ಎಂದರು.
ಕಾವೇರಿ ಒಳಹರಿವು ವಿಚಾರವಾಗಿ ಮಾತನಾಡಿದ ಅವರು, ನಿನ್ನೆ ಸ್ವಲ್ಪ ಮಳೆಯಾದ ಪರಿಣಾಮ ಇಂದು 8 ಸಾವಿರ ಕ್ಯೂಸೆಕ್ ಒಳಹರಿವು ಬಂದಿವೆ. ನಾಡಿದ್ದು ಪ್ರಾಧಿಕಾರದ ಸಭೆ ಇದ್ದು, ನಮಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಸೂಚಿಸಿದ್ದಾರೆ ಎಂದರು. ಬಳಿಕ ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿ ವಿಚಾರವಾಗಿ ನಿರ್ಣಯ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಅವರ ಸರ್ಕಾರ ಅವರಿಗೆ ಬೇಕಾದಂತೆ ಮಾಡಿಕೊಂಡಿದೆ. ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಸರ್ಕಾರ ನಮ್ಮ ರೈತರನ್ನು ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಕರ್ನಾಟಕ ಕೃತಕ ಅಭಾವ ಸೃಷ್ಟಿಸಿದೆ ಎಂದು ಸರ್ವಾನುಮತದ ನಿರ್ಣಯ ಕೈಗೊಂಡಿದೆ ಎಂಬ ವಿಚಾರವಾಗಿ ಮಾತನಾಡುತ್ತಾ, ಕೃತಕವೋ, ಸಹಜವೋ ಏನು ಎಂದು ನಿಮಗೆ ಗೊತ್ತಿದೆ. ಅವರು ಏನಾದರೂ ಮಾಡಿಕೊಳ್ಳಲಿ. ನಮಗಿರುವ ಬರದ ಪರಿಸ್ಥಿತಿ ನಾವು ಘೋಷಿಸಿದ್ದೇವೆ. ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ಮಾಡಿದೆ. ಬೆಂಗಳೂರಿನಲ್ಲಿ ನಿನ್ನೆ ಸ್ವಲ್ಪ ಮಳೆಯಾಗಿದೆ ಎಂದರು.
ಇದನ್ನೂ ಓದಿ :ಮೆರವಣಿಗೆ, ಮದುವೆ ಸಮಾರಂಭಗಳಲ್ಲಿ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ