ಬೆಂಗಳೂರು: ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ಹೆಚ್ಚು ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್ ಬಿ ತಿಮ್ಮಾಪುರ ತಿಳಿಸಿದ್ದಾರೆ.
ಜಲಾಶಯಕ್ಕೆ ಒಳ ಹರಿವು ಬಂದಿರುವುದರಿಂದ ಚಾಲು - ಬಂದ್ ಪದ್ಧತಿಯನ್ನು ಪರಿಷ್ಕರಿಸಿ 14 ದಿನ ನೀರು ಚಾಲು ಹಾಗೂ 10 ದಿನದ ಬದಲಿಗೆ 8 ದಿನ ಮಾತ್ರ ಬಂದ್ ಪದ್ಧತಿಯನ್ನು ಅನುಸರಿಸಿ ಅಕ್ಟೋಬರ್ 17ರ ಬದಲಿಗೆ ಅಕ್ಟೋಬರ್ 14ನೇ ತಾರೀಖಿನಿಂದಲೇ ನೀರು ಚಾಲು ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ, ಮುಂಗಾರು ಹಂಗಾಮಿಗೆ ನವೆಂಬರ್ 23ರ ವರೆಗೂ ನೀರು ಹರಿಸಲು ಕೈಗೊಂಡಿದ್ದ ನಿರ್ಣಯದ ಬದಲಾಗಿ ಡಿಸೆಂಬರ್ 10 ರವರೆಗೂ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ರೈತರ ಹಿತ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಸುಮಾರು 6 ಲಕ್ಷ ಬೆಕ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿ : ಇನ್ನೊಂದೆಡೆ, ತಮಿಳುನಾಡಿಗೆ ಮತ್ತೆ ಮುಂದಿನ 15 ದಿನಗಳ ಕಾಲ 3,000 ಕ್ಯೂಸೆಕ್ ನೀರು ಹರಿಸಲು ಕಾವೇರಿ ಜಲ ನಿಯಂತ್ರಣ ಸಮಿತಿ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ :ಕರ್ನಾಟಕಕ್ಕೆ ಮತ್ತೆ ಆಘಾತ ! ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ CWRC ಆದೇಶ
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯಗಳೆಲ್ಲಾ ಖಾಲಿ ಆಗಿದ್ದರೂ ಕರ್ನಾಟಕಕ್ಕೆ ಬರೆ ಮೇಲೆ ಬರೆ ಎಳೆಯಲಾಗುತ್ತಿದೆ. ಕಾವೇರಿ ಜಲ ನಿಯಂತ್ರಣ ಸಮಿತಿಯು ಮುಂದಿನ 15 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಮತ್ತೆ ಆದೇಶ ನೀಡಿರುವುದು ರಾಜ್ಯಕ್ಕೆ ದೊಡ್ಡ ಆಘಾತ ನೀಡಿದೆ. ಇಂಥ ಜಲಾಘಾತಗಳನ್ನು ಕೊಡುವುದಕ್ಕೇ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗಳನ್ನು ರಚನೆ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ನಮ್ಮದು. ಈ ಆದೇಶಗಳು ಸಂವಿಧಾನ ಹಾಗೂ ಒಕ್ಕೂಟದ ಆಶಯಗಳಿಗೆ ವಿರುದ್ಧವಾಗಿವೆ. ಕಾವೇರಿ ಕೊಳ್ಳದ ರೈತರ ಒಂದು ಬೆಳೆಗೂ ಸಮರ್ಪಕವಾಗಿ ನೀರು ಹರಿದಿಲ್ಲ. ಹೀಗಿದ್ದಾಗ ರಾಜ್ಯಕ್ಕೆ ಆದೇಶದ ಮೇಲೆ ಆದೇಶ ನೀಡಿ ಸಮಾನ ನ್ಯಾಯ ತತ್ವವನ್ನು ನಾಮಾವಶೇಷ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ :ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ ಎನ್ನುವ ಎದೆಗಾರಿಕೆ ಸರ್ಕಾರಕ್ಕಿಲ್ಲ : ಹೆಚ್. ಡಿ. ಕುಮಾರಸ್ವಾಮಿ