ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ ಜಿಲ್ಲೆಯ ಭೂ ಕುಸಿತ ಸಂತ್ರಸ್ತರಿಗೆ ಪುನರ್ವಸತಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - ಕಳಚೆ ಗ್ರಾಮ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಕುಟುಂಬಗಳಿಗೆ ಪುನರ್ವಸತಿ ವಿಚಾರವಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಬುಧವಾರ ವಿಚಾರಣೆ ನಡೆಸಿತು.

rehabilitation-of-families-affected-by-landslides-high-court-notice-to-government
ಉತ್ತರ ಕನ್ನಡ ಜಿಲ್ಲೆಯ ಭೂ ಕುಸಿತದ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By

Published : Jan 5, 2023, 6:30 AM IST

ಬೆಂಗಳೂರು: ಭೂ ಕುಸಿತದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಕುಟುಂಬಗಳಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಂ ಗೋಪಾಲಕೃಷ್ಣ ಗಾವಂಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಇದರಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠವು, ವಿಚಾರಣೆ ಮುಂದೂಡಿತು.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲ ಹೆಚ್.ಸುನೀಲ್ ಕುಮಾರ್ ವಾದ ಮಂಡಿಸಿ, 'ಕಳಚೆ ಗ್ರಾಮದಲ್ಲಿ 300 ಹೆಚ್ಚು ಕುಟುಂಬಗಳಿವೆ. ಗ್ರಾಮವು ಒಟ್ಟು 268.12 ಹೆಕ್ಟೇರ್ ಕೃಷಿ ಜಮೀನು ಮತ್ತು 1953.44 ಹೆಕ್ಟೇರ್ ಅರಣ್ಯ ಹೊಂದಿದೆ. ಅಲ್ಲಿನ ಶೇ.90ರಷ್ಟು ಜನ ರೈತರಾಗಿದ್ದು, ಕೃಷಿಯೇ ಅವರ ಜೀವನಾಧಾರವಾಗಿದೆ. ಆದರೆ, 2021ರ ಜು.22 ಮತ್ತು 23ರಂದು ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದ ಗ್ರಾಮದಲ್ಲಿ ಮೂರು ಬಾರಿ ಭೂ ಕುಸಿತ ಉಂಟಾಗಿ ದೊಡ್ಡ ಮಟ್ಟದಲ್ಲಿ ಸಾವು-ನೋವು ಸಂಭವಿಸಿದೆ' ಎಂದು ವಿವರಿಸಿದರು.

ಇದನ್ನೂ ಓದಿ:ಉತ್ತರ ಕನ್ನಡ: ಅತಿವೃಷ್ಟಿಯಿಂದ ಈ ಗ್ರಾಮ ನಲುಗಿ ವರ್ಷಗಳದ್ರೂ ಪರಿಹಾರ ಮಾತ್ರ ಮರೀಚಿಕೆ

'ಅಲ್ಲದೇ, ಗ್ರಾಮದ ಹಲವರು ಮನೆ ಕಳೆದುಕೊಂಡರು. ಸಾಕಷ್ಟು ಕೃಷಿ ಬೆಳೆ ನಾಶವಾಗಿದೆ. ಇದರಿಂದ ಗ್ರಾಮದ ಕುಟುಂಬಗಳನ್ನು ಕಾಳಿ ಹುಲಿ ಮೀಸಲು ಅರಣ್ಯ ಪ್ರದೇಶದ ಪಕ್ಕದ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕೃಷಿ ಜಮೀನನ್ನು ಅರಣ್ಯ ಪ್ರದೇಶದೊಂದಿಗೆ ಸಂಯೋಜಿಸಿ ಔಷಧೀಯ ಗುಣವುಳ್ಳ ಸಸ್ಯ, ಮರಗಳನ್ನು ಬೆಳೆಸಲಾಗುವುದೆಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆ ಕುರಿತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2021ರ ಏ.8ಕ್ಕೆ ನೋಟಿಫಿಕೇಷನ್ ಸಹ ಹೊರಡಿಸಿತ್ತು. ಆದರೆ, ಗ್ರಾಮಸ್ಥರಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈವರೆಗೆ ಕ್ರಮ ಜರುಗಿಸಿಲ್ಲ' ಎಂದು ದೂರಿದರು. ಆದ್ದರಿಂದ ಕಳಚೆ ಗ್ರಾಮದ ನಿವಾಸಿಗಳಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸಬೇಕು. ಆ ಪ್ರಕ್ರಿಯೆ ಕೈಗೊಳ್ಳಲು ಸಮಿತಿಯೊಂದರನ್ನು ರಚನೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಇಡೀ ಗ್ರಾಮವೇ ಸಂಪರ್ಕ ಕಡಿದುಕೊಂಡಿತ್ತು. ಕಳೆದ ಆಗಸ್ಟ್​​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್​ಗಳ ಪ್ರಯತ್ನದಿಂದ ಗ್ರಾಮಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮತ್ತೊಂದೆಡೆ, ಪ್ರವಾಹದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಲು ಸೂಚಿಸಿದ್ದರು ಎಂಬುವುದನ್ನು ಇಲ್ಲಿ ನೆನಪಿಸಬಹುದು.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಭೂ ಕುಸಿತ : ಅಧ್ಯಯನಕ್ಕೆ ಆಗ್ರಹ

ABOUT THE AUTHOR

...view details