ಬೆಂಗಳೂರು: ಕೋವಿಡ್ ಸೋಂಕಿತರಿಗೆ ಮತ್ತು ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲ ನಿಯಮಗಳನ್ನು ಮಾಡಿಕೊಳ್ಳಲಾಗಿತ್ತು. ಸದ್ಯ ರೋಗಿಗಳ ಬೆಡ್ ಕುರಿತು ಕೆಲವು ಬದಲಾವಣೆ ಮಾಡಲಾಗಿದೆ.
ರಾಜ್ಯದಲ್ಲಿ ಕೋವಿಡ್-19 ವ್ಯಾಪಕವಾಗಿ ಆವರಿಸಿದ ಹಿನ್ನೆಲೆ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆಯ ಅವಶ್ಯಕತೆ ಇತ್ತು. ಆ ಸಂದರ್ಭದಲ್ಲಿ ಖಾಯಿಲೆಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್ ಇತ್ಯಾದಿ (ಖಾಸಗಿ ಆರೋಗ್ಯ ಸೇವೆ ನೀಡುವವರು) ಕೆಪಿಎಂಇ ಕಾಯ್ದೆಯಡಿ ನೋಂದಾಯಿತಗೊಂಡ ಆಸ್ಪತ್ರೆಗಳನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಮತಿಸಲಾಗಿತ್ತು. ಮುಂದುವರೆದು, ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳ ಹಾಸಿಗೆಯನ್ನು ಹಂಚಲು ಮತ್ತು ಸರ್ಕಾರದಿಂದ ರೆಫರ್ ಮಾಡಿದ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆ ನೀಡುವವರು ವಿಧಿಸಬಹುದಾದ ಚಿಕಿತ್ಸಾ ದರಗಳನ್ನು ನಿಯಂತ್ರಿಸಲು ಅಧಿಸೂಚನೆ ಹೊರಡಿಸಲಾಗಿತ್ತು,
ಅದರಂತೆ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿಯಲ್ಲಿ ನೋಂದಾಯಿತಗೊಂಡ ಆಸ್ಪತ್ರೆಗಳಲ್ಲಿನ ಶೇ.50ರಷ್ಟು ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಪ್ರಾಧಿಕಾರಿಗಳು ರೆಫರ್ ಮಾಡುವ ರೋಗಿಗಳಿಗೆ ಚಿಕಿತ್ಸೆ ನೀಡಲು ಕಾಯ್ದಿರಿಸುವ ಬಗ್ಗೆ ಸೂಚಿಸಲಾಗಿತ್ತು. ಸರ್ಕಾರದಿಂದ ಗುರುತಿಸಲಾಗುವ ರೋಗಿಗಳಿಗೆ ಬಿಬಿಎಂಪಿ ವಲಯದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಆಯುಕ್ತರು, ಬಿಬಿಎಂಪಿ ಮತ್ತು ಇತರೆ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾಧಿಕಾರಿಗಳಿಂದ ಹಾಸಿಗೆ ಹಂಚಿಕೆ ಮಾಡುವ ಬಗ್ಗೆ ಸೂಚಿಸಲಾಗಿತ್ತು,
ಇತ್ತೀಚಿನ ದಿನಗಳಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಸಮರ್ಪಕ ಚಿಕಿತ್ಸೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಚಿಕಿತ್ಸೆಯ ಪೂರ್ವಾನುಮತಿಗಾಗಿ ಸಲ್ಲಿಸಿದ ವಿವರಗಳನ್ನು ಗಮನದಲ್ಲಿರಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.22ರಷ್ಟು ಹಾಸಿಗೆಗಳು ಭರ್ತಿಯಾಗಿದ್ದು, ಇನ್ನುಳಿದಂತೆ ಶೇ.78ರಷ್ಟು ಹಾಸಿಗೆಗಳು ಖಾಲಿಯಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ನಿಗದಿಪಡಿಸಿರುವ ಡಿಸಿಹೆಚ್‌ಸಿ ಹಾಗೂ ಡಿಹೆಚ್‌ಸಿಗಳಲ್ಲಿನ ಚಿಕಿತ್ಸೆ ಸೌಲಭ್ಯದ ಹಾಸಿಗೆಗಳು ಭರ್ತಿಯಾಗುವವರೆಗೆ ಅಲ್ಲಿಯೇ ಚಿಕಿತ್ಸಾ ವ್ಯವಸ್ಥೆ ಮಾಡಬೇಕಾಗಿದೆ. ಹೆಚ್ಚುವರಿ ಸೋಂಕಿತರಿದ್ದಲ್ಲಿ ತದನಂತರ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಆಧಾರದ ಮೇಲೆ ಭರ್ತಿ ಮಾಡಲು ಸೂಕ್ತವಿರುತ್ತದೆ.
ಹೀಗಾಗಿ ಇನ್ಮುಂದೆ ಬೆಡ್‌ಗಳ ವ್ಯವಸ್ಥೆ ಹಾಗೂ ಬೆಡ್ ಹಂಚಿಕೆ ಕುರಿತು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.