ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ತಮ್ಮ ಮುಂದಿನ ನಿಲುವಿನ ಬಗ್ಗೆ ಬಹಿರಂಗಪಡಿಸಿದ್ದಾರೆ.
ತಮ್ಮ ಮುಂದಿನ ನಿಲುವು ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್ನಲ್ಲೇ ಉಳಿಯುವಂತಹ ಪ್ರಯತ್ನ ಮಾಡುವೆ. ಅಸಮಾಧಾನ ಇಲ್ದೇ ಇರೋ ರಾಜಕೀಯ ಪಕ್ಷಗಳು ಇಲ್ವೇ ಇಲ್ಲ. ಸುಧಾಕರ್ ಜೊತೆನೂ ಮಾತನಾಡಿ ಮನವೊಲಿಸೋ ಕೆಲಸವನ್ನ ಮಾಡುವೆ. ಹಲವು ಕಾಂಗ್ರೆಸ್ ಮುಖಂಡರು ಮನವೊಲಿಸಲು ಮುಂದಾಗಿದ್ದಾರೆ. 40 ವರ್ಷದಿಂದ ಕಾಂಗ್ರೆಸ್ನಲ್ಲಿಯೇ ಸೇವೆ ಸಲ್ಲಿಸಿದ್ದೇನೆ. ಅದೇ ರೀತಿ ಮುಂದಿನ ದಿನಗಳಲ್ಲಿ ಮುಂದುವರಿಯಲು ಬಯಸಿದ್ದೇನೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಪಕ್ಷ ಕಟ್ಟಿ ಬೆಳೆಸಿದ್ದೇವೆ. ಅವರೂ ಕೂಡ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಪಕ್ಷಕ್ಕೆ ಸಾಕಷ್ಟು ಸೇವೆ ಮಾಡಿದ್ದಾರೆ. ಕುಟುಂಬದಲ್ಲಿ ಅಸಮಾಧಾನ ಸಹಜ. ಆದ್ರೆ ಅವುಗಳನ್ನೆಲ್ಲಾ ಮರೆತು ಜೊತೆಗೆ ಇರೋಣ, ಜೊತೆಗೆ ಸಾಯೋಣ ಎಂದು ತೀರ್ಮಾಣ ಮಾಡಿದ್ದೇವೆ. ಎಂಟಿಬಿ ನಾಗರಾಜ್ ಅವರ ನೋವು ಏನು ಅನ್ನೋದನ್ನು ಕೇಳಿ ಪರಿಹರಿಸುತ್ತೇವೆ ಎಂದಿದ್ದಾರೆ.
ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ನ ಘಟಾನುಘಟಿ ನಾಯಕರು
ಇನ್ನು ಇವರನ್ನು ಭೇಟಿ ಮಾಡಿದ ಡಿಸಿಎಂ ಜಿ. ಪರಮೇಶ್ವರ್, ಬೆಳಗ್ಗೆ ಆರು ಗಂಟೆಗೆಯೇ ಎಂಟಿಬಿ ನಾಗರಾಜ್ ಅವರ ಮನೆಗೆ ಬಂದಿದ್ದೇವೆ. ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್ ಅವರ ಮನವೊಲಿಸೋಕೆ ಬಂದಿದ್ದೇವೆ. ಎಲ್ಲರೂ 40 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಮೂರ್ನಾಲ್ಕು ಗಂಟೆಗಳ ಕಾಲ ಮನವೊಲಿಸಲು ಮುಂದಾದೆವು. ಇದೀಗ ಕಾಂಗ್ರೆಸ್ನಲ್ಲೇ ಉಳಿಯಲು ಎಂಟಿಬಿ ನಾಗರಾಜ್ ನಿರ್ಧರಿಸಿದ್ದಾರೆ. ನಮ್ಮ ನಡುವಿನ ಗೊಂದಲವನ್ನ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.