ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಸರ್ಕಾರ ಸಿದ್ಧವಿದೆ. ಆದರೆ ನಮ್ಮ ಪೊಲೀಸರೇ ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗುವ ವಿಶ್ವಾಸವಿದೆ. ಪೊಲೀಸ್ ತನಿಖೆ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸಿಎಂ ಬಸವರಾಜ ಬೊಮ್ಮಾಯಿ ತುರ್ತು ಬುಲಾವ್ ನೀಡಿದ್ದರು. ಗೃಹ ಕಚೇರಿ ಕೃಷ್ಣಾಗೆ ಗೃಹ ಸಚಿವರನ್ನು ಕರೆಸಿಕೊಂಡ ಸಿಎಂ ಬೊಮ್ಮಾಯಿ, ಕಾನೂನು ಸುವ್ಯವಸ್ಥೆ ಬಗ್ಗೆ, ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಕುರಿತು ಚರ್ಚಿಸಿದರು. ನಂತರ ಸಿಎಂ ಜೊತೆಯಲ್ಲೇ ಸಿಎಂ ಖಾಸಗಿ ನಿವಾಸಕ್ಕೆ ತೆರಳಿ ಮತ್ತೊಮ್ಮೆ ಚರ್ಚೆ ನಡೆಸಿದರು. ಎನ್‌ಐಎಗೆ ಪ್ರಕರಣ ವಹಿಸುವ ಒತ್ತಾಯ ಕೇಳಿಬರುತ್ತಿರುವ ಕುರಿತು ಸಮಾಲೋಚನೆ ನಡೆಸಿದರು. ಪರಿಸ್ಥಿತಿ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುವ ನಿಲುವಿನೊಂದಿಗೆ ಇಂದಿನ ಸಭೆಗೆ ತೆರೆ ಎಳೆದರು.
ಇದನ್ನೂ ಓದಿ:Praveen Murder case.. ತಂದೆಯಿಂದಲೇ ಮಗನ ಚಿತೆಗೆ ಅಗ್ನಿಸ್ಪರ್ಶ, ಕುಟುಂಬಸ್ಥರ ಆಕ್ರಂದನ
ಸಿಎಂ ಜೊತೆಗಿನ ಚರ್ಚೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇವೆಲ್ಲಾ ಏಕಾಏಕಿ ನಡೆಯುವಂತ ಕೃತ್ಯಗಳು. ಈತರಹದ ಘಟನೆ ನಡೆದಾಗ ಯಾವ ಕೇಸ್ಅನ್ನು ಸಹ ಬಿಟ್ಟಿಲ್ಲ. ಹಿಂದಿನ ಸರ್ಕಾರದಲ್ಲಿ ಕೆಲವು ಕೇಸ್ಗಳ ತನಿಖೆ ಆಯ್ತು, ಕೆಲವನ್ನು ತನಿಖೆ ಮಾಡಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಕೇಸ್ಗಳ ತನಿಖೆ ನಡೆಯುತ್ತಿವೆ ಎಂದು ಸಚಿವರು ಸಮರ್ಥಿಸಿಕೊಂಡರು.