ಕೆ.ಆರ್.ಪುರ: ಕ್ಷೇತ್ರದ ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು 20 ಕೋಟಿ ರೂ ವೆಚ್ಚದಲ್ಲಿ ರಸ್ತೆ, ಚರಂಡಿ, ಯುಜಿಡಿ, ಸೇರಿದಂತೆ ಏಳು ಕಡೆ ಸಚಿವ ಭೈರತಿ ಬಸವರಾಜ್ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಇಪ್ಪತ್ತು ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ತಿಂಗಳಲ್ಲಿ ಸಂಪೂರ್ಣವಾಗಿ ಕಾಮಗಾರಿಯನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದರು.
ಬಿಬಿಎಂಪಿ ಚುನಾವಣೆಗೆ ಯಾವಾಗ ಬೇಕಾದರೂ ಸಿದ್ಧ ಎಂದ ಭೈರತಿ ಬಸವರಾಜ್ ಡಿಕೆಶಿ ಆಹ್ವಾನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಈಗ ಬಿಜೆಪಿ ಪಕ್ಷದಲ್ಲಿದ್ದೇವೆ, ಯಾವ ಪಕ್ಷಕ್ಕೂ ಹೋಗಲ್ಲ. ಯಾರು ಆಹ್ವಾನ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ವರಿಷ್ಠರಿದ್ದಾರೆ ಅವರು ಹೇಳಿದಂತೆ ಮಾಡುತ್ತೇವೆ. ಕಮಲ ಪಕ್ಷದಲ್ಲಿದ್ದೇವೆ ಬಿಜೆಪಿ ಪಕ್ಷದಿಂದಲೇ ಚುನಾವಣೆ ಎದುರಿಸುತ್ತೇವೆ ಎಂದರು.
ಬಿಬಿಎಂಪಿ ಚುನಾವಣೆ ನಡೆಸಲು ನಮ್ಮದೇನೂ ಅಭ್ಯಂತರ ಇಲ್ಲ. ಚುನಾವಣೆ ಯಾವಾಗ ನಡೆದರೂ ಬಿಜೆಪಿ ಪಕ್ಷ ಸಿದ್ಧವಿದೆ. ಯಾವಾಗ ಬೇಕಾದರೂ ನಿಗದಿಪಡಿಸಲಿ ಎಂದು ಹೇಳಿದರು.