ಕರ್ನಾಟಕ

karnataka

ETV Bharat / state

ಇಸ್ರೋ ಗಗನಯಾನ; ಪರೀಕ್ಷಾರ್ಥ ಉಡಾವಣೆ ಮುಂದಿನ ಯೋಜನೆಗಳಿಗೆ ಪ್ರಮುಖ ಹೆಜ್ಜೆ: ಬಾಹ್ಯಾಕಾಶ ತಜ್ಞರ ಅಭಿಮತ

ಇಸ್ರೋದ ಗಗನಯಾನ ಮಿಷನ್​ನ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಈ ಬಗ್ಗೆ ನೆಹರು ತಾರಾಲಯದ ಹಿರಿಯ ವಿಜ್ಞಾನಿಗಳು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

By ETV Bharat Karnataka Team

Published : Oct 21, 2023, 7:35 PM IST

Updated : Oct 21, 2023, 9:08 PM IST

ಬಾಹ್ಯಾಕಾಶ ತಜ್ಞರು
ಬಾಹ್ಯಾಕಾಶ ತಜ್ಞರು

ಗಗನಯಾನ ಮಿಷನ್​ ಬಗ್ಗೆ ಹಿರಿಯ ವಿಜ್ಞಾನಿಗಳ ಹೇಳಿಕೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾನ ಪರೀಕ್ಷಾ ವಾಹನ ಅಭಿವೃದ್ಧಿ ಹಾರಾಟ ಯೋಜನೆ - 1 (ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ ಮಿಷನ್ - 1 ಅಥವಾ ಟಿವಿ-ಡಿ1) ಇಂದು ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿರುವ ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್, ಉಡಾವಣೆ ಒಂದು ಪರೀಕ್ಷಾ ಉಡ್ಡಯನ ವಾಹನವನ್ನು ಮಾತ್ರ ಒಳಗೊಂಡಿದ್ದರೂ, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಇದು ಅತ್ಯಂತ ಮುಖ್ಯ ಹೆಜ್ಜೆಯಾಗಿದೆ. ಇಂದು ಬೆಳಗಿನ ಆರಂಭಿಕ ಉಡಾವಣಾ ಪ್ರಯತ್ನದ ಸಂದರ್ಭದಲ್ಲಿ, ಯೋಜನೆಯ ಕಂಪ್ಯೂಟರ್ ಸಮಸ್ಯೆಯೊಂದನ್ನು ಪತ್ತೆಹಚ್ಚಿದ ಕಾರಣ ಉಡಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು ಎಂದು ಹೇಳಿದರು.

ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಟಿವಿ-ಡಿ1 ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಎದುರಾದ ಸಣ್ಣ ಸಮಸ್ಯೆಯ ಕಾರಣದಿಂದ ಉಡಾವಣೆಯನ್ನು ಮುಂದೂಡಲಾಗಿದ್ದು, ಅದರ ಕುರಿತು ಇನ್ನಷ್ಟು ವಿಶ್ಲೇಷಣೆ ನಡೆಸಲಾಗುವುದು ಮತ್ತು ರಾಕೆಟ್‌ನ ಇಂಜಿನ್ ಇಗ್ನಿಷನ್ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬ ಕಂಡು ಬಂದಿತ್ತು ಎಂದು ತಿಳಿಸಿದರು. ಅದಾದ ಬಳಿಕ, 9:35ರ ವೇಳೆಗೆ, ಇಸ್ರೋ ತಾನು ಎದುರಾಗಿದ್ದ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿರುವುದಾಗಿ ಘೋಷಿಸಿತು. ಎರಡನೇಯ ಉಡಾವಣಾ ಪ್ರಯತ್ನವನ್ನು ಇಂದೇ ಬೆಳಗ್ಗೆ 10:00 ಗಂಟೆಗೆ ಸರಿಯಾಗಿ ನೆರವೇರಿಸುವುದಾಗಿ ತಿಳಿಸಿ, ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು ಎಂದು ಸಂತಸ ವ್ಯಕ್ತಪಡಿಸಿದರು.

ಮೂರು ದಿನ 400 ಕಿಮೀ ಎತ್ತರದಲ್ಲಿರುವ ಭೂಮಿಯ ಕಕ್ಷೆಗೆ ಮಾನವ:ಭಾರತ ತನ್ನ ಗಗನಯಾತ್ರಿಗಳನ್ನು ಮೂರು ದಿನಗಳ ಅವಧಿಗೆ ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳಕಕ್ಷೆಗೆ ಕೊಂಡೊಯ್ಯುವ ಮಹತ್ವದ ಗುರಿಯನ್ನು ಹೊಂದಿದೆ. ಇದನ್ನು ಯಶಸ್ವಿಯಾಗಿ ಕೈಗೊಂಡರೆ, ಭಾರತ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸಿದ ಸಾಧನೆ ನಡೆಸಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ ಎಂದು ವಿಜ್ಞಾನಿ ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಟಿವಿಗೆ ಗಿರೀಶ್​ ಲಿಂಗಣ್ಣ ಪ್ರತಿಕ್ರಿಯೆ:ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ ಈಟಿವಿ ಭಾರತದ ಜೊತೆ ಮಾತನಾಡಿ, ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ (ಟಿವಿ-ಡಿ1) ಭೂಮಿಯಿಂದ ಅಂದಾಜು 17 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಒಯ್ದ ಕ್ರ್ಯೂ ಮಾಡ್ಯುಲ್ (ಸಿಎಂ) ಹಾಗೂ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಗಳು ಯಶಸ್ವಿಯಾಗಿ ಬೇರ್ಪಟ್ಟು, ಶ್ರೀಹರಿಕೋಟಾದ ಕರಾವಳಿಯಿಂದ 10 ಕಿಲೋಮೀಟರ್ ಒಳಭಾಗದಲ್ಲಿ, ಸಮುದ್ರದ ಮೇಲೆ 10:11ಕ್ಕೆ ಸರಿಯಾಗಿ ಯಶಸ್ವಿಯಾಗಿ ಇಳಿದವು. ಯೋಜನೆಯ ಉಡಾವಣೆ, ಬೇರ್ಪಡುವಿಕೆ, ಮುಖ್ಯ ಪ್ಯಾರಾಶೂಟ್ ತೆರೆಯುವಿಕೆ ಮತ್ತು ಭೂಮಿಗೆ ಇಳಿಯುವ ಪ್ರಕ್ರಿಯೆಗಳು ಉಡಾವಣೆಯ ಬಳಿಕ ಕೇವಲ 11 ನಿಮಿಷಗಳಲ್ಲಿ ಪೂರ್ಣಗೊಂಡವು ಎಂದು ಮಾಹಿತಿ ನೀಡಿದರು.

ಭಾರತೀಯ ನೌಕಾಪಡೆಯ ಎರಡು ಹಡಗುಗಳಾದ ಐಎನ್ಎಸ್ ಶಕ್ತಿ ಹಾಗೂ ಎಸ್‌ಸಿಐ ಸರಸ್ವತಿ ನೌಕೆಗಳನ್ನು ಸುರಕ್ಷಿತ ಅಂತರದಲ್ಲಿ ಕಾಯುವಂತೆ ಸೂಚಿಸಿ, ಪತನಗೊಂಡ ಖಾಲಿ ಕ್ಯಾಪ್ಸೂಲ್‌ಗಳನ್ನು ಸಂಗ್ರಹಿಸುವಂತೆ ತಿಳಿಸಲಾಗಿತ್ತು. ಈ ಎರಡೂ ನೌಕೆಗಳು ಅತ್ಯಂತ ಮುಖ್ಯವಾದ ಕ್ರ್ಯೂ ಮಾಡ್ಯುಲ್ ಸಂಗ್ರಹಣೆಯಲ್ಲಿ ಮುಖ್ಯ ಪಾತ್ರ ವಹಿಸಿದವು ಎಂದು ಹೇಳಿದರು.

ಪರೀಕ್ಷಾ ವಾಹನ ವಿಶೇಷವಾಗಿ ವಿನ್ಯಾಸಗೊಂಡಿರುವ, ದೇಶೀಯವಾಗಿ ನಿರ್ಮಿಸಿರುವ, ಒಂಟಿ ಹಂತದ ದ್ರವ ಇಂಧನ ರಾಕೆಟ್ ಆಗಿತ್ತು. ಅಬಾರ್ಟ್ ಯೋಜನೆಯನ್ನು ಪೂರ್ಣಗೊಳಿಸಲು ವಿನ್ಯಾಸಗೊಂಡಿತ್ತು. ಇದು ಒಂದು ಕ್ರ್ಯೂ ಮಾಡ್ಯುಲ್ (ಸಿಎಂ) ಹಾಗೂ ಭಾರತೀಯ ಗಗನಯಾತ್ರಿಗಳ ಕ್ಷೇಮವನ್ನು ಕಾಪಾಡಿಕೊಳ್ಳಲು ಇರುವ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಗಳನ್ನು ಹೊಂದಿತ್ತು. ಇದಕ್ಕೆ ಕ್ಷಿಪ್ರ ಪ್ರತಿಕ್ರಿಯೆ ನೀಡುವ ಮೋಟರ್‌ಗಳು ಹಾಗೂ ಸಿಎಂ ಫೇರಿಂಗ್ (ಸಿಎಂಎಫ್) ಹಾಗೂ ಇಂಟರ್‌ಫೇಸ್ ಅಡಾಪ್ಟರ್‌ಗಳನ್ನು ಅಳವಡಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಹಾರಾಟದ ಸಂದರ್ಭದಲ್ಲಿ, ಪರೀಕ್ಷಾ ವಾಹನ ಅಂದುಕೊಂಡ ರೀತಿಯಲ್ಲೇ, ಮೇಲಕ್ಕೆ ಏರುವ ಪಥದಲ್ಲಿ, ಮ್ಯಾಕ್ 1.2 ವೇಗದಲ್ಲಿ ಅಬಾರ್ಟ್ ಪ್ರಕ್ರಿಯೆಯನ್ನು ಕೈಗೊಂಡಿತು. ಮಾನವ ಸಹಿತ ಗಗನಯಾನ ಯೋಜನೆಯಲ್ಲೂ ಈ ಪ್ರಕ್ರಿಯೆ ಇದೇ ರೀತಿ ನಡೆಯಲಿದೆ ಎಂದು ಗಿರೀಶ್ ಲಿಂಗಣ್ಣ ಹೇಳಿದರು.

ಇದನ್ನೂ ಓದಿ:Gaganyaan: ಗಗನಯಾನ ಯೋಜನೆಯ ಮೊದಲ ಹಂತದ ಪರೀಕ್ಷಾರ್ಥ ಪರೀಕ್ಷೆ ಯಶಸ್ವಿ.. ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಕ್ರ್ಯೂ ಮಾಡ್ಯೂಲ್​

Last Updated : Oct 21, 2023, 9:08 PM IST

ABOUT THE AUTHOR

...view details