ಬೆಂಗಳೂರು :ಬಿಜೆಪಿಯಲ್ಲಿ ಆಂತರಿಕ ಕಲಹ ಹೆಚ್ಚಾಗಿದೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿಯನ್ನು ಭಯಾನಕ ಜಗಳ ಪಾರ್ಟಿ ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿ ಎಂದರೆ ಭಯಾನಕ ಜಗಳ ಪಾರ್ಟಿ. ಕೇಂದ್ರ ಬಿಜೆಪಿ ನಾಯಕರ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನ ಹೆಚ್ಚುತ್ತಿದೆ ಎಂದು ಹೇಳಿರುವ ಅವರು, ಕೇಂದ್ರ ಬಿಜೆಪಿ ನಾಯಕರ ಒಳಜಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ವರ್ಸಸ್ ಮೋದಿ, ರಾಜಸ್ಥಾನದಲ್ಲಿ ವಸುಂದರಾ ವರ್ಸಸ್ ಮೋದಿ, ಕರ್ನಾಟಕದಲ್ಲಿ ಯಡಿಯೂರಪ್ಪ ವರ್ಸಸ್ ಮೋದಿ, ಮ.ಪ್ರದೇಶದಲ್ಲಿ ಶಿವರಾಜ್ ವರ್ಸಸ್ ನರೋತ್ತಮ-ಕೈಲಾಶ್, ಉತ್ತರಾಖಂಡ್‌ನಲ್ಲಿ ತ್ರಿವೇಂದ್ರ-ಧಾಮಿ ವರ್ಸಸ್ ದಿಲ್ಲಿ, ಗೋವಾದಲ್ಲಿ ಪ್ರಮೋದ್ ಸಾವಂತ್ ವರ್ಸಸ್ ವಿಶ್ವಜೀತ್ ರಾಣೆ, ಹರಿಯಾಣ ರಾಜ್ಯದಲ್ಲಿ ಕಟ್ಟರ್ ವರ್ಸಸ್ ವಿಜ್, ಹಿಮಾಚಲ ಪ್ರದೇಶದಲ್ಲಿ ಜಯರಾಮ್ ವರ್ಸಸ್ ಅನುರಾಗ್, ಗುಜರಾತ್‌ನಲ್ಲಿ ರೂಪಾನಿ ವರ್ಸಸ್ ಮೋದಿ, ಶಾ ಎಂದು ತಮ್ಮ ಟ್ವೀಟ್‌ನಲ್ಲಿ ರಂದೀಪ್ ಸಿಂಗ್ ಸುರ್ಜೇವಾಲಾ ಆರೋಪ ಮಾಡಿದ್ದಾರೆ.
ಸುರ್ಜೇವಾಲ ಟ್ವೀಟ್ಗೆ ಪೂರಕವಾಗಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಉತ್ತರಖಾಂಡದಲ್ಲಿ ತ್ರೀವೇಂದ್ರ ಸಿಂಗ್ ರಾವತ್ ರಾಜೀನಾಮೆ ನಂತರ ಸಿಎಂ ಆದ ತೀರ್ಥ್ ಸಿಂಗ್ ರಾವತ್ ನಾಲ್ಕೇ ತಿಂಗಳಿಗೆ ರಾಜೀನಾಮೆ ನೀಡಿದರು, ಬಿ ಎಸ್ ಯಡಿಯೂರಪ್ಪ ಕಣ್ಣೀರಿಡುತ್ತಾ ರಾಜೀನಾಮೆ ನೀಡಿದರು, ಕಾರಣ ಇನ್ನೂ ನಿಗೂಢ! ಈಗ ಗುಜರಾತ್ ಸಿಎಂ ವಿಜಯ್ ರೂಪಾನಿ ಏಕಾಏಕಿ ರಾಜೀನಾಮೆ. ಈ ರಾಜೀನಾಮೆಗಳು ದೇಶಾದ್ಯಂತ ಬಿಜೆಪಿಗೆ ಜನವಿರೋಧ ಎದುರಾಗಿರುವ ದ್ಯೋತಕ ಎಂದಿದೆ.
ಮತ್ತೊಂದು ಟ್ವೀಟ್‌ನಲ್ಲಿ ಕೇಂದ್ರ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ನಾಯಕತ್ವ ಬದಲಾದರೂ, ಸಿಎಂ ಬದಲಾದರೂ ಕರ್ನಾಟಕದೆಡೆಗಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗದು. ನೂತನ ಸಿಎಂ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿ ಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲದಾಗಿದೆ. ಜಿಎಸ್ಟಿ ಬಾಕಿ ಕೊಡಲಿಲ್ಲ, ಲಸಿಕೆ ಕೊರತೆ ನೀಗಲಿಲ್ಲ, ನೆರೆ ಪರಿಹಾರವೂ ಇಲ್ಲ, ನರೇಗಾ ಕೂಲಿ ಬಾಕಿಯೂ ಬರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.