ಬೆಂಗಳೂರು: ರಾಂಬೊ ಸರ್ಕಸ್ ಕಲಾವಿದರು ವಿಶಿಷ್ಟ ಮತದಾನ ಜಾಗೃತಿ ಕಾರ್ಯಕ್ರಮವನ್ನು ಇಂದು (ಶುಕ್ರವಾರ) ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಎದುರಿನ ಸೆಂಟ್ ಜಾನ್ಸ್ ಸಭಾಂಗಣದಲ್ಲಿ ನಡೆಸಿಕೊಟ್ಟರು. ಜನರು ತಮ್ಮ ಹಕ್ಕು ಚಲಾಯಿಸುವಂತೆ ಜನರಿಗೆ ಮನವಿ ಮಾಡಲು, ಭಿತ್ತಿಪತ್ರ ಮತ್ತು ಪೋಸ್ಟರ್‌ಗಳನ್ನು ಬಳಸಿ ಚುನಾವಣೆಯ ಜಾಗೃತಿ ಮೂಡಿಸಿದರು.
ಈ ಅಭಿಯಾನದಿಂದ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಉಸಿರು ಬಿಗಿ ಹಿಡಿದುಕೊಳ್ಳುವಂತೆ ಮಾಡುವ ಅದ್ಬುತ ಪ್ರದರ್ಶನಗಳೊಂದಿಗೆ ಶನಿವಾರ “ವಿಶ್ವ ಸರ್ಕಸ್ ದಿನ” ವನ್ನು ಕೂಡ ರಾಂಬೋ ಸರ್ಕಸ್ ತಂಡ ಆಚರಿಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಜಿತ್ ದಿಲೀಪ್ ತಿಳಿಸಿದರು. ಮುಂಬೈ, ಗೋವಾ, ವಿಶಾಖಪಟ್ಟಣಂ ಮತ್ತು ಸೂರತ್ನಲ್ಲಿ ಅಭೂತಪೂರ್ವ ಯಶಸ್ವಿ ಪ್ರದರ್ಶನಗಳ ನಂತರ, ಏಪ್ರಿಲ್ ತಿಂಗಳ 3ನೇ ಶನಿವಾರ ಆಚರಿಸಲ್ಪಡುವ ‘ವಿಶ್ವ ಸರ್ಕಸ್ ದಿನ’ ಆಚರಿಸಲು ‘ರಾಂಬೋ ಸರ್ಕಸ್’ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ಆಗಮಿಸಿದೆ ಎಂದರು.
ನಾವು ಭರವಸೆ ನೀಡಿದಂತೆ ನಗರದಲ್ಲಿ ಮೊದಲ ಬಾರಿಗೆ ರಾಂಬೊ ಸರ್ಕಸ್ ಅನ್ನು ರಷ್ಯಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ಇಥಿಯೋಪಿಯಾ ಮತ್ತು ಭಾರತದ ಅಂತಾರಾಷ್ಟ್ರೀಯ ಕಲಾವಿದರೊಂದಿಗೆ 120 ನಿಮಿಷಗಳ ಕಾಲ ಸಮ್ಮೋಹನಗೊಳಿಸುವ ಮತ್ತು ನೋಡುಗರು ಉಸಿರು ಬಿಗಿ ಹಿಡಿಯುವಂತೆ ಮಾಡುವ ಪ್ರದರ್ಶನ ನೀಡಲು ಸಜ್ಜಾಗಿದ್ದೇವೆ. ರಾಂಬೊ ತಂಡವು ಏರಿಯಲ್ ರಿಂಗ್, ಹ್ಯಾಂಡ್ ಟು ಹ್ಯಾಂಡ್, ಸ್ಲಿಂಯ್, ಬಬಲ್ ಆಕ್ಟ್, ಬೌನ್ಸಿಂಗ್ ಬಾಲ್, ಲೇಸರ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ನೊಂದಿಗೆ ಬಂದಾಗ ನಿಮಗೆ ಸಿಗುವ ಮನರಂಜನೆಯನ್ನು ವರ್ಣಿಸಲು ಅಸಾಧ್ಯ ಎಂದು ಸುಜಿತ್ ದಿಲೀಪ್ ಮಾಹಿತಿ ನೀಡಿದರು.