ಬೆಂಗಳೂರು: ಬಂಟರು ಅಂದ್ರೆ ಶ್ರೀಮಂತರಲ್ಲ. ಬಂಟ ಸಮುದಾಯದಲ್ಲೂ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಹೀಗಾಗಿ ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಮಾಜಿ ಸಚಿವ ರಮಾನಾಥ್ ರೈ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಬಂಟರ ಸಂಘದಿಂದ ಆಯೋಜಿಸಿದ್ದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ರಮಾನಾಥ್ ರೈ ಅವರಿಗೆ ದಿ. ಡಾ. ಜೀವರಾಜ್ ಆಳ್ವ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ರಮಾನಾಥ್ ರೈ , ಬಂಟ ಸಮುದಾಯ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದೆ. ಜೊತೆಗೆ ಎಲ್ಲಾ ಸಮಾಜದ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಆದ್ರೂ ಕೂಡ ಬಂಟ ಸಮುದಾಯದಲ್ಲೂ ಸಾಕಷ್ಟು ಮಂದಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿವರಿದ್ದಾರೆ. ಅವರಿಗೆ ಸೂಕ್ತ ನ್ಯಾಯ ಸಿಗಬೇಕು. ಆದ್ರಿಂದ ಬೆಂಗಳೂರು ಬಂಟರ ಸಂಘದ ಮೂಲಕ ಬಂಟ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡ್ರು.
ಕರ್ನಾಟಕ ರಾಜ್ಯದಲ್ಲಿ ಬಂಟ ಸಮಾಜ 3- ಬಿ ಪ್ರವರ್ಗದಲ್ಲಿದೆ. ಆದ್ರೆ ಕೇಂದ್ರದಲ್ಲಿ ಸಾಮಾನ್ಯ ವರ್ಗದಲ್ಲಿದೆ. ಹೀಗಾಗಿ ಬಂಟ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು. ಸರ್ಕಾರದ ಸೌಲಭ್ಯ ಗಳು ಬಂಟ ಸಮುದಾಯಕ್ಕೂ ಸಿಗಬೇಕು ಎಂಬುದು ಈ ಬೇಡಿಕೆಯ ಉದ್ದೇಶವಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣ ಸ್ವಾಮಿ ಅವರು, ಬೆಂಗಳೂರು ಬಂಟರ ಸಂಘದ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದ್ರು.