ಕರ್ನಾಟಕ

karnataka

ETV Bharat / state

ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಕ್ಷೇತ್ರ ನಿರ್ಮಾಣ: ಸಚಿವ ಅಶ್ವತ್ಥನಾರಾಯಣ - Ashwath Narayan

ದಕ್ಷಿಣ ಭಾರತದಲ್ಲಿ ರಾಮ ಮಂದಿರ ನಿರ್ಮಿಸಲು ಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮದೇವರ ಬೆಟ್ಟವನ್ನು ಜೀರ್ಣೋದ್ಧಾರ ಮಾಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನೂ ಆಹ್ವಾನಿಸಲಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

ಸಚಿವ ಅಶ್ವತ್ಥನಾರಾಯಣ
ಸಚಿವ ಅಶ್ವತ್ಥನಾರಾಯಣ

By

Published : Dec 28, 2022, 5:10 PM IST

Updated : Dec 28, 2022, 10:17 PM IST

ಬೆಂಗಳೂರು: ರಾಮನಗರದ ರಾಮದೇವರ ಬೆಟ್ಟದಲ್ಲಿ ದಕ್ಷಿಣ ಅಯೋಧ್ಯೆ ಕ್ಷೇತ್ರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಿಎಂ ಬೊಮ್ಮಾಯಿ ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನಮ್ಮ ರಾಮನಗರದ ಮೇಲೆ ರಾಮನ ಪ್ರೇರಣೆ ಇದೆ. ರಾಮನ ಅಭಿವೃದ್ಧಿ ಇಲ್ಲಿಯೂ ಆಗಬೇಕು. ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ರಾಮ ಮಂದಿರ ನಿರ್ಮಾಣ ಆಗುವ ವಿಶ್ವಾಸವಿದೆ. ಬರುವ ಬಜೆಟ್​​ನಲ್ಲಿ ಸಿಎಂ ಈ ಯೋಜನೆಗೆ ಸಂಬಂಧಿಸಿದಂತೆ ಅನುದಾನ ಘೋಷಣೆ ಮಾಡಬಹುದು ಎಂದರು.

ಉತ್ತರ ಪ್ರದೇಶ ಸಿಎಂಗೆ ಆಹ್ವಾನ: ರಾಮನಗರದ ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲಿರುವ ರಾಮನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನೂ ಆಹ್ವಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಅಮಿತ್​ ಶಾ ಭೇಟಿಯಿಂದ ಪಕ್ಷಕ್ಕೆ ದೊಡ್ಡ ಶಕ್ತಿ:ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಅವರ ಭೇಟಿಯಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ. ಹಳೆ ಮೈಸೂರು ಭಾಗದಲ್ಲಿ ನಮ್ಮ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಇದನ್ನೂ ಓದಿ:ರಾಮನಗರದಲ್ಲಿ 'ಅಯೋಧ್ಯೆ' ಮಾದರಿ ರಾಮಮಂದಿರ ನಿರ್ಮಿಸಲು ಸಿಎಂಗೆ ಸಚಿವ ಅಶ್ವತ್ಥನಾರಾಯಣ ಪತ್ರ

ಸರ್ವಾಂಗೀಣ ಅಭಿವೃದ್ಧಿ: ದಕ್ಷಿಣ ಕರ್ನಾಟಕದಲ್ಲಿ ವಿಶೇಷ ಪಕ್ಷ ಸಂಘಟನೆ ಮಾಡಲು ಅಮಿತ್ ಶಾ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ. ಹೆಚ್ಚು ಶಾಸಕರು ಆಯ್ಕೆ ಆಗಬೇಕು, ಈ ನಿಟ್ಟಿನಲ್ಲಿ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್​ಗೆ ಮೈಶುಗರ್ ಕಾರ್ಖಾನೆಯನ್ನೇ ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಹಳೆ ಮೈಸೂರು ಭಾಗದ ಜನ ಜೆಡಿಎಸ್, ಕಾಂಗ್ರೆಸ್​ನನ್ನು ಬಹಳ ನಂಬಿದ್ದರು. ಅವರನ್ನು ನಂಬಿ ಅಲ್ಲಿ ಏನೂ ಆಗಲಿಲ್ಲ. ಪಾಂಡವಪುರ ಮೈಶುಗರ್ ಸೇರಿದಂತೆ ಎಲ್ಲ ಅಭಿವೃದ್ಧಿ ಕೂಡ ಬಿಜೆಪಿಯಿಂದಲೇ ಆಗಿದೆ. ಎಲ್ಲ ವರ್ಗದ ಜನರನ್ನು ಪ್ರತಿನಿಧಿಸಿ ಸರ್ವಾಂಗೀಣ ಅಭಿವೃದ್ಧಿಗೆ ನಾವು ಕೆಲಸ ಮಾಡ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ರಾಮನಗರದಲ್ಲಿ ಅಶ್ವತ್ಥ ನಾರಾಯಣ ಮಂದಿರವನ್ನೂ ಕಟ್ಟಲಿ: ಡಿಕೆಶಿ ವ್ಯಂಗ್ಯ

ರಾಜ್ಯದಲ್ಲಿ ಮುಂಚಿತವಾಗಿಯೇ ಚುನಾವಣೆ ಆಗುತ್ತೆ ಎಂಬ ಚರ್ಚೆ ಇನ್ನೂ ಉದ್ಭವವಾಗಿಲ್ಲ. ಅವಧಿಪೂರ್ವ ಚುನಾವಣೆ ವಿಚಾರವನ್ನು ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಜೆಡಿಎಸ್​ನಿಂದ ಯಾವ ಅಭಿವೃದ್ಧಿಯೂ ಆಗಿಲ್ಲ: ಮಂಡ್ಯ ಜಿಲ್ಲೆ ಯಾವ ಪರಿಸ್ಥಿತಿಗೆ ಬಂದಿದೆ ಅಂತ ಇಡೀ ದೇಶಕ್ಕೆ ಗೊತ್ತಿದೆ. ಜೆಡಿಎಸ್ ನಂಬಿ ಯಾವ ಅಭಿವೃದ್ಧಿಯೂ ಆಗಿಲ್ಲ. ನಮ್ಮ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿ ಒತ್ತು ನೀಡಿ ಆ ಭಾಗದ ಜನರಿಗೆ ಮೂಲ ಸೌಕರ್ಯಗಳನ್ನು ನೀಡಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಮಹತ್ವ ಕೊಟ್ಟಿದೆ. ಕೇವಲ ರಾಜಕೀಯ ಮಾಡುವುದಕ್ಕಷ್ಟೇ ಜೆಡಿಎಸ್ ಇರುವುದು.

ಬಿಜೆಪಿ ಜನರ ಪಕ್ಷ:ಬಿಜೆಪಿಯು ಅಂಬೇಡ್ಕರ್, ಕೆಂಪೇಗೌಡ ಸಂಗೊಳ್ಳಿ ರಾಯಣ್ಣ, ನಾರಾಯಣ ಗುರು ಸೇರಿದಂತೆ ಮಹಾಪುರುಷರಿಗೆ ಗೌರವ ಸಲ್ಲಿಸುತ್ತದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹೆಸರು ಕೂಡ ಘೋಷಣೆ ಮಾಡಿದೆ. ಬಿಜೆಪಿ ಜನರ ಪಕ್ಷ, ಒಂದು ಕುಟುಂಬದ ಪಕ್ಷ ಅಲ್ಲ ಎಂದರು.

ಇದನ್ನೂ ಓದಿ:ಅಯೋಧ್ಯೆಗೆ ಸಚಿವ ಅಶ್ವತ್ಥ ನಾರಾಯಣ ನೇತೃತ್ವದ ತಂಡ.. ಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ ವಿತರಣೆ

ರಾಮದೇವರ ಬೆಟ್ಟವನ್ನು ''ದಕ್ಷಿಣ ಭಾರತದ ಅಯೋಧ್ಯೆ''ಯಂತೆ ಬೆಳೆಯಬೇಕೆನ್ನುವ ಅಭಿಲಾಷೆಯೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮುಖ್ಯಮಂತ್ರಿಗೆ ಈ ಹಿಂದೆ ಪತ್ರ ಬರೆದಿದ್ದರು. ಹಾಗೆಯೇ ಪತ್ರದ ಒಂದು ಪ್ರತಿಯನ್ನು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೂ ಬರೆದು ಗಮನ ಸೆಳೆದಿದ್ದರು.

Last Updated : Dec 28, 2022, 10:17 PM IST

ABOUT THE AUTHOR

...view details