ಬೆಂಗಳೂರು :ಸಹೋದರ-ಸಹೋದರಿಯರ ಬಾಂಧವ್ಯ ಗಟ್ಟಿಗೊಳಿಸುವ ರಕ್ಷಾ ಭಾವವನ್ನು ಹುಟ್ಟಿಸುವ ಹಬ್ಬ ರಕ್ಷಾಬಂಧನ. ಆದರೆ, ಕೊರೊನಾ ಹಿನ್ನೆಲೆ ಆ ಸಂಭ್ರಮ, ಸಡಗರ ನಗರದಲ್ಲಿ ಕೊಂಚ ಮೌನವಾಗಿದೆ. ಚಿಕ್ಕ ಮಕ್ಕಳು, ದೊಡ್ಡವರು ಯಾರೂ ಹೊರಗಡೆ ಓಡಾಡಿ, ಬಗೆಬಗೆಯ ರಾಖಿಗಳನ್ನು ಆರಿಸಿ ಖರೀದಿಸುವ ಹಬ್ಬದ ಖುಷಿ ಈಗಿಲ್ಲ. ಹೀಗಾಗಿ, ಮಾರುಕಟ್ಟೆಗಳಿಗೆ ಬಂದ ರಾಖಿಗಳು ಖರೀದಿಯಾಗದೆ ಹಾಗೇ ಉಳಿದಿವೆ.
ಇನ್ನೊಂದೆಡೆ, ಕೊರೊನಾ ಆರ್ಭಟದಿಂದ ಇನ್ನೂ ಶಾಲಾ-ಕಾಲೇಜುಗಳು ತೆರೆದಿಲ್ಲ. ಫ್ರೆಂಡ್‌ಶಿಪ್ ಬ್ಯಾಂಡ್, ರಕ್ಷಾಬಂಧನಗಳನ್ನು ಅತಿಹೆಚ್ಚು ಖರೀದಿಸುತ್ತಿದ್ದ ಶಾಲಾ-ಕಾಲೇಜಿಗೆ ಹೋಗುತ್ತಿದ್ದ ಮಕ್ಕಳು ಈಗ ಯಾರೂ ಹೊರ ಬರುತ್ತಿಲ್ಲ. ಮನೆಯ ದೊಡ್ಡವರು ಬಂದ್ರೂ ಕೇವಲ ಒಂದೆರಡು ಖರೀದಿಸಿ ಹೋಗ್ತಾರೆ. ಹೀಗಾಗಿ, ರಕ್ಷಾಬಂಧನ ಎಂದಿನಂತೆ ಆಚರಣೆಯಾಗ್ತಿಲ್ಲ ಅಂತಾರೆ ಅಂಗಡಿ ಮಾಲೀಕರಾದ ಗಂಗಾರಾಮ್.
ರಕ್ಷಾಬಂಧನ ಹಬ್ಬದ ಕಳೆ ಗೌಣ, ಶಾಲೆ-ಕಾಲೇಜುಗಳಿಲ್ಲದೆ ವ್ಯಾಪಾರವೂ ಡಲ್ ಉತ್ತರಭಾರತದ ಜನ ಬೆಂಗಳೂರಲ್ಲಿ ನೆಲೆಸಿದ್ದಾರೆ. ಅವರ ಮನೆಗಳಲ್ಲಿ ಸಂಪ್ರದಾಯವಾಗಿ ರಕ್ಷಾಬಂಧನ ಆಚರಣೆ ಮಾಡಲಾಗುತ್ತಿದೆ. ಉಳಿದಂತೆ ಸರಳವಾಗಿ ಹಬ್ಬ ಆಚರಣೆಯಾಗುತ್ತಿದೆ. ಆದರೆ, ಬೇರೆ ವರ್ಷಗಳಂತೆ ರಕ್ಷಾ ಬಂಧನದ ಸಾಮೂಹಿಕ ಆಚರಣೆಗಳು, ಸಮಾರಂಭಗಳಿಗೆ ಈ ವರ್ಷ ತಡೆಯಾಗಿದೆ. ಅಣ್ಣ, ತಮ್ಮಂದಿರು, ಅಕ್ಕ ತಂಗಿಯರೆಲ್ಲ ಒಂದೆಡೆ ಸೇರಿ ಹಬ್ಬದ ಊಟ ಮಾಡುವ ಸಂಭ್ರಮಕ್ಕೂ ಕೊರೊನಾ ಅಡ್ಡಿಯಾಗಿದೆ.
ಮನೆಗಳಲ್ಲೇ ಇರುವ ಅಣ್ಣಂದಿರಿಗೆ ಮಾತ್ರ ರಾಖಿ ಹಬ್ಬ ಕಟ್ಟಿ ಆಚರಿಸುತ್ತಿದ್ದಾರೆ. ದೂರದೂರದ ಊರಿನಲ್ಲಿರುವವರಿಗೂ ರಾಖಿ ಪಾರ್ಸೆಲ್ ಕಳಿಸುತ್ತಿದ್ದವರು, ಈ ಬಾರಿ ಸಾಧ್ಯವಾಗಿಲ್ಲ. ಕೊರಿಯರ್ ಸರ್ವೀಸ್ ಸರಿಯಾಗಿ ಇಲ್ಲದೆ ರಕ್ಷಾಬಂಧನಗಳ ಖರೀದಿಯೇ ನಡೆಯುತ್ತಿಲ್ಲ. ಕೇವಲ ಶೇ.20 ರಿಂದ 25 ಬ್ಯುಸ್‌ನೆಸ್ ಇದೆ ಅಂತಾರೆ ವ್ಯಾಪಾರಿ ರಾಮ್ ಪಟೇಲ್ ತಿಳಿಸಿದ್ರು.
ಇನ್ನೊಂದೆಡೆ, ಜನಿವಾರ ಧರಿಸುವ ಉಪಕರ್ಮದ ಹಬ್ಬವನ್ನೂ ಜನ ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ. ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಾದ ವರಮಹಾಲಕ್ಷ್ಮಿ ಹಬ್ಬ, ರಕ್ಷಾಬಂಧನ, ಮುಂಬರುವ ಗಣೇಶ ಚತುರ್ಥಿಯ ಮೇಲೂ ಕೊರೊನಾ ಪ್ರಭಾವ ಬೀರಿದೆ.