ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಗೊಂದಲ ಮುಂದುವರೆದಿದೆ. ಈಗಾಗಲೇ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಲ್ಲಿಯವರೆಗೆ ನಾಮಪತ್ರ ವಾಪಸ್ ಪಡೆಯುವ ಯಾವುದೇ ಸುಳಿವು ನೀಡಿಲ್ಲ. ನಾಮಪತ್ರ ವಾಪಸ್ ಪಡೆಯಲು ನಾಳೆ ಕೊನೆ ದಿನವಾಗಿದೆ.
ಉಭಯ ಪಕ್ಷಗಳ ನಾಯಕರ ನಡುವೆ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವನ್ನು ತಡೆಯಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿದೆಯಾದರೂ ನಿರೀಕ್ಷಿತ ಫಲ ಇಲ್ಲಿಯವರೆಗೂ ಸಿಕ್ಕಿಲ್ಲ. ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ನಮ್ಮ ಅಭ್ಯರ್ಥಿಯನ್ನೇ ಬೆಂಬಲಿಸಬೇಕು. ಆ ಮೂಲಕ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಚುನಾಯಿಸಿದಂತಾಗುತ್ತದೆ ಎಂಬ ವಾದವನ್ನು ಮುಂದಿಟ್ಟಿದೆ. ಆದರೆ, ಜೆಡಿಎಸ್ ಜಾತ್ಯತೀತ ಮತಗಳು ವಿಭಜನೆಯಾಗಿ ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವುದನ್ನು ತಪ್ಪಿಸಲು ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಬೇಕು. ಅದಕ್ಕಾಗಿ ಕಾಂಗ್ರೆಸ್‍ನ ಎರಡನೇ ಅಭ್ಯರ್ಥಿ ವಾಪಸ್ ಪಡೆಯಬೇಕು ಎಂಬ ಬೇಡಿಕೆ ಇಟ್ಟಿದೆ.
ಹೊಂದಾಣಿಕೆ ಅನಿವಾರ್ಯ: ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ಬೇಕಾದ ಮತಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಪರಸ್ಪರ ಹೊಂದಾಣಿಕೆ ಅನಿವಾರ್ಯವಾಗಿದೆ. ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಗೆ ದೊರೆಯುವ ಮತಗಳಿಗಿಂತ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚು ಮತ ದೊರೆಯುವುದರಿಂದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಬೇಕು ಎಂಬ ಮನವಿಯನ್ನು ಮಾಡಲಾಗಿದೆ.
ಸಿದ್ದರಾಮಯ್ಯ ಭೇಟಿ:ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಅವರು, ಪರಿಷತ್ನ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಅವರನ್ನು ಕಳೆದ ಭಾನುವಾರ ಭೇಟಿ ಮಾಡಿ ಬೆಂಬಲ ಕೋರಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್‍ನ ಎರಡನೇ ಅಭ್ಯರ್ಥಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ವಿಧಾನಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್ ಹಾಗೂ ಟಿ.ಎ. ಶರವಣ, ಮಂಗಳವಾರ(ನಿನ್ನೆ) ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರ ನೀಡುವಂತೆ ಕೋರಿದ್ದರು.