ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಇನ್ನೆರಡು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - ವಿದ್ಯಾರಣ್ಯಪುರ ಕಟ್ಟಡ ಕುಸಿತ

ರಾಜ್ಯದಲ್ಲಿ ಮುಂದಿನ ಎಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Department of Meteorology
ರಾಜ್ಯದಲ್ಲಿ ಇನ್ನೂ 2 ದಿನ ಮಳೆ

By

Published : May 22, 2023, 9:40 AM IST

ಬೆಂಗಳೂರು:ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಎರಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ವಿಜಯನಗರ, ಹಾವೇರಿ, ಧಾರವಾಡ, ಬೆಳಗಾವಿ, ಕೊಪ್ಪಳ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಇಂದು (ಮೇ 22) ಮತ್ತು ಮೇ 23ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ.

ಇನ್ನೊಂದೆಡೆ, 3-4 ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದೆ. ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಬಾದಾಮಿ ಹಾಗೂ ಯಾದಗಿರಿ ಸೇರಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಳವಾಗಿದೆ. ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆಯಿಂದಾಗಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕೊಂಚ ಇಳಿಕೆಯಾಗಿದೆ.

ವಿದ್ಯಾರಣ್ಯಪುರದಲ್ಲಿ ಕುಸಿದು ಬಿದ್ದ ಕಟ್ಟಡ

ಕುಸಿದು ಬಿದ್ದ ಮನೆ:ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡ ನಿನ್ನೆ ಕುಸಿದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ಪಡೆ ಆಗಮಿಸಿ ಕಟ್ಟಡದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಗಿಲ್ಲ. ಮಳೆಗಾಲದಲ್ಲಿ ಆಗಾಗ್ಗೆ ಮನೆಗಳು ಕುಸಿದು ಬೀಳುತ್ತಿರುವ ಘಟನೆಗಳು ನಗರದಲ್ಲಿ ನಡೆಯುತ್ತಿವೆ.

ಇದನ್ನೂ ಓದಿ:ರಾಜಧಾನಿಯಲ್ಲಿ ಸುರಿದಿದ್ದು ಕೇವಲ ಒಂದೇ ಗಂಟೆ ಮಳೆಗೆ ಟೆಕ್ಕಿ ಬಲಿ; ಅವಾಂತರಗಳ ಮಾಹಿತಿ

ಭಾರಿ ಮಳೆಗೆ ಬೆಂಗಳೂರು ತತ್ತರ: ನಿನ್ನೆ(ಭಾನುವಾರ) ಕೆ.ಆರ್‌.ಸರ್ಕಲ್‌ನಲ್ಲಿರುವ ಅಂಡರ್​ ಪಾಸ್​ ಜಲಾವೃತಗೊಂಡು ಅಲ್ಲಿ ಕಾರ್‌ನಲ್ಲಿ ಸಿಲುಕಿದ್ದ ಆಂಧ್ರ ಪ್ರದೇಶದ ಯುವತಿ ಮೃತಪಟ್ಟರು. ಇದಲ್ಲದೆ ನಗರದಲ್ಲಿ ಆಲಿಕಲ್ಲು ಮಳೆ ಸುರಿದು ಹತ್ತಾರು ಮರಗಳು, ವಿದ್ಯುತ್​ ಕಂಬಗಳು ಧರೆಗುರುಳಿವೆ. ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತು ಮುಂಭಾಗದ ಚಲಿಸುತ್ತಿದ್ದ ಕಾರು-ಬೈಕ್ ಮೇಲೆ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಹಾಗೂ ವಿಜಯನಗರದಲ್ಲಿ ಬಿಎಂಟಿಸ್ ಬಸ್ ಮೇಲೆ ಮರಗಳು ಬಿದ್ದಿವೆ. ಯಾವುದೇ ಪ್ರಾಣಹಾನಿ ಸಂಭವಿಸಿದ ವರದಿಯಾಗಿಲ್ಲ.

ಮಾಗಡಿ ರಸ್ತೆ, ರಾಜಾಜಿನಗರ, ಪಂಚಮಶೀಲನಗರ, ಬೆಂಗಳೂರು ಪ್ರೆಸ್ ಕ್ಲಬ್, ನಾಗರಬಾವಿ, ಸ್ಯಾಂಕಿರಸ್ತೆ, ಲಿಂಗರಾಜಪುರ, ಕ್ರೈಸೆಂಟ್ ರಸ್ತೆ, ಬಿನ್ನಿಮಿಲ್, ಬಸವನಗುಡಿ, ವಿಶ್ವೇಶ್ವರಯ್ಯಪುರ, ಜಾಲಹಳ್ಳಿ, ಇಂದಿರಾನಗರ, ಮತ್ತಿಕೆರೆ, ಮಲ್ಲೇಶ್ವರ, ಹೊಸಕೆರೆಹಳ್ಳಿ, ಹನುಮಂತ ನಗರ, ಜೆ.ಪಿ. ನಗರ, ಕೆ.ಜಿ.ರಸ್ತೆ, ಶೇಷಾದ್ರಿಪುರಂ, ಗಾಂಧಿನಗರ, ಕುಮಾರಸ್ವಾಮಿ ಲೇಔಟ್, ರಾಜರಾಜೇಶ್ವರಿನಗರ, ವಿಠಲ್‌ ಮಲ್ಯ ರಸ್ತೆ, ಸಂಪಂಗಿರಾಮನಗರ, ಜಯಮಹಲ್ ಪ್ಯಾಲೆಸ್ ರಸ್ತೆ, ಆರ್.ಟಿ. ನಗರ ಸೇರಿ ನಗರ ನಾನಾ ಭಾಗಗಳಲ್ಲಿ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿ ಸಂಚಾರಿ ಪೊಲೀಸರು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ:ಸ್ಕೂಟಿ ಮೇಲೆ ಮರ ಬಿದ್ದು ವ್ಯಕ್ತಿ ಸಾವು; ಇಬ್ಬರು ವಿದ್ಯಾರ್ಥಿಗಳು ನದಿ ನೀರುಪಾಲು

ABOUT THE AUTHOR

...view details