ನವದೆಹಲಿ:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವ ಲಕ್ಷಣಗಳು ದಟ್ಟವಾಗಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ದ್ವೇಷದ ಬಜಾರ್ ಬಂದ್ ಆಗಿ, ಪ್ರೀತಿಯ ಅಂಗಡಿ ತೆರೆಯಲಾಗಿದೆ ಎಂದು ಹೇಳಿದರು.
ದೆಹಲಿಯಲ್ಲಿ ಕರ್ನಾಟಕದ ವಿಕ್ಟರಿ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಸರ್ವಾಧಿಕಾರಿ ಪಕ್ಷ ಅಧಿಕಾರದಲ್ಲಿತ್ತು. ಇನ್ನೊಂದೆಡೆ ಸಾಮಾನ್ಯ ಜನರ ಶಕ್ತಿ ಅದನ್ನು ಹೋಗಲಾಡಿಸಿದೆ. ಪ್ರೀತಿ, ವಿಶ್ವಾಸದಿಂದ ನಾವು ಈ ಚುನಾವಣೆಯನ್ನು ಎದುರಿಸಿದ್ದೆವು. ಅದು ರಾಜ್ಯದಲ್ಲಿ ಯಶಸ್ವಿಯಾಯಿತು. ಕೊನೆಗೂ ಪ್ರೀತಿ ಗೆದ್ದಿದೆ ಎಂದು ಬಣ್ಣಿಸಿದರು.
ರಾಜ್ಯದಲ್ಲಿ ದ್ವೇಷದ ಸಂತೆ ಬಂದ್ ಆಗಿದೆ. ಪ್ರೀತಿಯ ಅಂಗಡಿ ಆರಂಭವಾಗಿದೆ. ಇದು ರಾಜ್ಯದ ಎಲ್ಲ ಜನರ ಗೆಲುವಾಗಿದೆ. ನಾವು ಜನರಿಗೆ 5 ಗ್ಯಾರಂಟಿಗಳ ಭರವಸೆ ನೀಡಿದ್ದೆವು. ಚುನಾವಣಾ ಪ್ರಚಾರ ವೇಳೆ ನಾವು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸೇರಿದಂತೆ ಎಲ್ಲ ನಾಯಕರು ಮೊದಲ ಕ್ಯಾಬಿನೆಟ್ನಲ್ಲಿ ಎಲ್ಲ ಭರವಸೆಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದೆವು. ಕೊಟ್ಟ ಮಾತಿನಂತೆ ಮೊದಲ ಸಂಪುಟದಲ್ಲೇ ಭರವಸೆಗಳನ್ನು ಈಡೇರಿಸಲಾಗುವುದು. ನಾವು ಅವುಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಪುನರುಚ್ಚರಿಸಿದರು.
ಕರ್ನಾಕದ ಜನರಿಗೆ ಧನ್ಯವಾದ:ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ನೀಡಿದ್ದಕ್ಕೆ ಧನ್ಯವಾದಗಳು. ಚುನಾವಣೆಗಾಗಿ ದುಡಿದ ಎಲ್ಲ ಕಾರ್ಯಕರ್ತರು, ನಾಯಕರು, ಜನರಿಗೂ ಧನ್ಯವಾದಗಳು. ನಿಮ್ಮೆಲ್ಲರ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ರಾಜ್ಯದಲ್ಲಿ ಪ್ರೀತಿಯ ಆರಂಭವಾಗಿದೆ. ದ್ವೇಷ ಮುಗಿದಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಓದಿ:ಮರುಕಳಿಸಿದ ಇತಿಹಾಸ: ಆಡಳಿತ ಪಕ್ಷಕ್ಕೆ ಸೋಲು, 1999ರ ನಂತರ ಕಾಂಗ್ರೆಸ್ಗೆ ಹೆಚ್ಚು ಸ್ಥಾನ