ಬೆಂಗಳೂರು: ಬಸವಗುಡಿಯ ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಬಿಐಗೆ(ಕೇಂದ್ರ ತನಿಖಾ ದಳ) ವಹಿಸಲು ಸರ್ಕಾರ ನಿರಾಕರಿಸಿದ್ದು, ತಜ್ಞರ ಸಮಿತಿ ರಚಿಸುವ ಸಂಬಂಧ ಆರ್ಬಿಐ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದೆ.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್, ರಾಘವೇಂದ್ರ ಸಹಕಾರಿ ಬ್ಯಾಂಕ್ ಅವ್ಯವಹಾರ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಮಾತನಾಡುತ್ತಾ, ಬ್ಯಾಂಕ್‌ನಲ್ಲಿ 46 ಸಾವಿರ ಜನ ಠೇವಣಿದಾರರಿದ್ದಾರೆ. ಹತ್ತು ವರ್ಷದಿಂದ ಹಗರಣ ನಡೆಯುತ್ತಿದೆ. ಆದರೆ ಪ್ರತಿ ವರ್ಷ ಬ್ಯಾಂಕ್ಗೆ ಒಳ್ಳೆಯ ಪ್ರಶಸ್ತಿ ಕೊಡುತ್ತಾ ಜನರಿಗೆ ಮೋಸ ಮಾಡಲಾಗಿದೆ. ಸರ್ಕಾರ ಬರೀ ಆಡಿಟ್ ಮಾಡುತ್ತಿದೆ. ಹಿಂದಿನ ಆಡಿಟರ್ಗಳ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಯಾಕೆ ಪ್ರಕರಣವನ್ನು ಸಿಬಿಐಗೆ ಕೊಡದೆ ಸಿಐಡಿಗೆ ಕೊಟ್ಟಿದ್ದೀರಾ? ನಿಮ್ಮಲ್ಲಿ ಸಿಬ್ಬಂದಿ ಇದೆಯಾ? ಎಂದು ಪ್ರಶ್ನಿಸಿದರು.
ಈ ಕುರಿತು ಸರ್ಕಾರ ಕೂಡಲೇ ಒಂದು ಸಮಿತಿ ಮಾಡಬೇಕು. ಹೈಕೋರ್ಟ್ ಈ ಪ್ರಕರಣದಲ್ಲಿ ಮೇಲುಸ್ತುವಾರಿ ಮಾಡುತ್ತಿದೆ ಅಂತ ನಾವು ಜನರಿಗೆ ಕೋರ್ಟ್ಗೆ ಹೋಗಿ ಎನ್ನಬೇಕಾ? ನಮ್ಮ ಕೇಂದ್ರ ಹಣಕಾಸು ಸಚಿವರು ನಮ್ಮನ್ನು ಕೇಳಿ ಹಣ ಇಟ್ಟಿದ್ದೀರಾ ಎನ್ನುತ್ತಾರೆ. ಹೀಗಿದ್ದಾಗ ನಾವೇನು ಮಾಡಬೇಕು? ಜನರಿಗೆ ನಾವು ಏನು ಹೇಳಬೇಕು? ಅಕ್ರಮದ ಫಲಾನುಭವಿಗಳು ಯಾರು ಎಂದು ಸರ್ಕಾರಕ್ಕೆ ಗೊತ್ತಿಲ್ಲವೇ? ಸಿಎಗಳನ್ನು ಯಾಕೆ ಬಂಧಿಸಿಲ್ಲ? ಕೂಡಲೇ ಸರ್ಕಾರ ತಜ್ಞರ ಸಮಿತಿ ರಚಿಸಬೇಕು. ಇಲ್ಲವೇ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಇಲ್ಲದೇ ಇದ್ದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರೇ ಸಾಲ ಪಡೆದುಕೊಂಡಿದ್ದಾರೆ. ಆದರೆ ಆರ್ಬಿಐ ನಿಯಮದ ಪ್ರಕಾರ ಅಧ್ಯಕ್ಷರಲ್ಲ ಅವರ ಸಂಬಂಧಿಕರಿಗೂ ಸಾಲ ಕೊಡುವಂತಿಲ್ಲ. ಆದರೆ ಇಲ್ಲಿ ಸಾಲ ಕೊಡಲಾಗಿದೆ. ಸಾಲದ ಖಾತೆಗಳಿಗೆ ದಾಖಲೆಯೇ ಇಲ್ಲ. ಸಾಲದ ಅರ್ಜಿಯಿಲ್ಲ, ಆಸ್ತಿ ಅಡಮಾನ ಇಲ್ಲ. 2 ಸಾವಿರ ಕೋಟಿ ರೂ ಅವ್ಯವಹಾರ ನಡೆದಿದೆ ಎಂದರು.
ಹಿಂದೆ ನಮ್ಮ ಸರ್ಕಾರ ಇದ್ದಾಗ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರ ನಡೆದಾಗ ಅಧ್ಯಕ್ಷರನ್ನೇ ಬಂಧಿಸಲಾಗಿತ್ತು. ಹಾಗಾಗಿ ಈಗ ಸೂಕ್ತ ಕ್ರಮ ಕೈಗೊಳ್ಳಬೇಕು. ಬರೀ ಕೋರ್ಟ್ಗೆ ಹೋದರೆ ಠೇವಣಿದಾರರು ಏನು ಮಾಡಬೇಕು. ಗೆದ್ದವನು ಸೋತ, ಸೋತವನು ಸತ್ತ ಅನ್ನುವಂತಾಗಲಿದೆ. ಹಾಗಾಗಿ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ತಳ್ಳಿ. ಸಿಐಡಿ ಬಗ್ಗೆ ನಮಗೆ ಗೌರವವಿದೆ. ಆದರೆ ಸಾವಿರಾರು ಹಣ ಅವ್ಯವಹಾರ ಇದೆ. ಸಿಐಡಿಗೂ ಆಮಿಷ ಒಡ್ಡಬಹುದು ಹಾಗಾಗಿ ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ನೂತನ ಸಚಿವರನ್ನು ಪರಿಚಯಿಸಿದ ಸಿಎಂ ಬೊಮ್ಮಾಯಿ