ಬೆಂಗಳೂರು:ನಾಮಪತ್ರ ವಾಪಸ್ ಪಡೆಯುವ ತನಕ ಶರತ್ಗೆ ಗಡುವು ಇದೆ. ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯದ ಬಳಿಕ ಕ್ರಮ ಗ್ಯಾರಂಟಿ ಎಂದು ಸಚಿವ ಆರ್.ಅಶೋಕ್ ಮತ್ತೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಸದ ಬಚ್ಚೇಗೌಡರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಶರತ್ ಬಚ್ಚೇಗೌಡರ ನಾಮಪತ್ರ ಸಲ್ಲಿಕೆ ವೇಳೆಯೂ ಬಚ್ಚೇಗೌಡರ ಪತ್ನಿ ಭಾಗವಹಿಸಿದ್ದರು. ಇದೆಲ್ಲವನ್ನ ಗಮನಿಸಲಾಗಿದೆ. ಈ ಬಗ್ಗೆ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕಾ ಎಂಬ ಬಗ್ಗೆ ಪಕ್ಷ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಶರತ್ ಬಚ್ಚೇಗೌಡ ಜೊತೆ ಸಿಎಂ ಹಾಗೂ ನಾನು ಹಲವು ಬಾರಿ ಮಾತನಾಡಿದ್ದೇವೆ. ಈಗ ಅವರು ಏನೂ ಮಾತನಾಡುವುದು ಸರಿಯಲ್ಲ. ಹೊಸಕೋಟೆಗೆ ಸೋಮವಾರ ಹೋಗುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆಲ್ಲ ಕ್ರಮ ಗ್ಯಾರಂಟಿ. ಪಕ್ಷಕ್ಕೆ ನಿಷ್ಟರಾಗಿದ್ದರೆ ನಾಮಪತ್ರ ವಾಪಸ್ ಪಡೆಯಬೇಕು. ಇಲ್ಲವಾದರೆ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಯಶವಂತಪುರದಲ್ಲಿ ಜಗ್ಗೇಶ್ ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ. ಯಶವಂತಪುರದಲ್ಲಿ ಜೆಡಿಎಸ್ನ ನಾಯಕರು ದೊಡ್ಡ ಸಂಖ್ಯೆಯಲ್ಲಿ ಪಕ್ಷಕ್ಕೆ ಬರೋರು ಇದ್ದಾರೆ. ಬೇರೆ ಪಕ್ಷದ ಪ್ರಮುಖ ನಾಯಕರು ಭೇಟಿ ಮಾಡುವವರು ಇದ್ದಾರೆ. ನಾಳೆ ಆದರೆ ಸಿಎಂ ಭೇಟಿಯಾಗಿಸಿ ಪಕ್ಷ ಸೇರ್ಪಡೆ ಮಾಡಿಸುತ್ತೇನೆ ಎಂದು ತಿಳಿಸಿದರು.
ಹೊಸಕೋಟೆ ಬಿಟ್ಟರೆ ಬೇರೆ ಕ್ಷೇತ್ರದಲ್ಲಿ ಯಾವುದೇ ತೊಂದರೆ ಇಲ್ಲ. ಕೆಆರ್‌ಪುರಂ, ಯಶವಂತಪುರದಲ್ಲಿ 50 ಸಾವಿರಕ್ಕಿಂತ ಹೆಚ್ಚು ಲೀಡ್ನಲ್ಲಿ ಗೆಲ್ಲುತ್ತೇವೆ. ಹಿಂದಿನ ಸರ್ಕಾರ ಜಗಳದ ಸರ್ಕಾರ. ಈ ಬಾರಿ ಉಪಚುನಾವಣೆಯಲ್ಲಿ 15 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.