ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕನ್ನಡಿಗರ ತಲೆಯ ಮೇಲೆ ಬರೀ ಕಲ್ಲಲ್ಲ, ಚಪ್ಪಡಿ ಕಲ್ಲು ಹಾಕುತ್ತಿರುವುದು ಕಟು ಸತ್ಯ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡುವ ಕಲೆ ಸಿದ್ದರಾಮಯ್ಯನವರಿಗೆ ಚೆನ್ನಾಗಿ ಕರಗತವಾಗಿದೆ. ಎಷ್ಟಾದರೂ ಸುಳ್ಳೇ ಕಾಂಗ್ರೆಸ್ ಪಕ್ಷದ ಮನೆ ದೇವರಲ್ಲವೇ? ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಆರ್.ಅಶೋಕ್ ಎಕ್ಸ್ ಪೋಸ್ಟ್ ಹೀಗಿದೆ: 15ನೇ ಹಣಕಾಸು ಆಯೋಗ ತನ್ನ 2020-21ರ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ. ಶಿಫಾರಸು ಮಾಡಿದ್ದುದು ನಿಜ. ಆದರೆ 2021-22ರಿಂದ 2025-26ರವರೆಗಿನ ತನ್ನ ಅಂತಿಮ ವರದಿಯಲ್ಲಿ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ. ಇದು ಸತ್ಯಾಂಶ. ತಾವು ಹೇಳಿರುವುದು ಅರ್ಧ ಸತ್ಯವೆಂದು ತಮಗೂ ಗೊತ್ತು.
ಕೋವಿಡ್-19 ಸಾಂಕ್ರಾಮಿಕದ ನಂತರದ ಪರಿಸ್ಥಿತಿಯಲ್ಲಿ ಆರ್ಥಿಕ ಪುನಶ್ಚೇತನಕ್ಕಾಗಿ 2020-21ನೇ ಹಣಕಾಸು ವರ್ಷದಿಂದ ಈವರೆಗೆ ಕರ್ನಾಟಕಕ್ಕೆ 6,561.91 ಕೋಟಿ ರೂ. ಮೊತ್ತವನ್ನು 50 ವರ್ಷಗಳ ಬಡ್ಡಿರಹಿತ ಸಾಲವಾಗಿ ಕರ್ನಾಟಕಕ್ಕೆ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಬಡ್ಡಿ ಭರಿಸುತ್ತದೆ. ಇದು ಸತ್ಯವಲ್ಲವೇ? ಇನ್ನು ತೆರಿಗೆ ಹಂಚಿಕೆ ವಿಷಯಕ್ಕೆ ಬಂದರೆ, 2004-14ರ ನಡುವಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ 81,795 ಕೋಟಿ ರೂ. ತೆರಿಗೆ ಹಂಚಿಕೆಯಾಗಿತ್ತು. ಎನ್ಡಿಎ ಸರ್ಕಾರದ ಅವಧಿಯಲ್ಲಿ 2014-24 (2023, ನವೆಂಬರ್ 17 ರವರೆಗೆ) 2.77 ಲಕ್ಷ ಕೋಟಿ ರೂ.ಗೂ ಹೆಚ್ಚು ಬಿಡುಗಡೆಯಾಗಿದೆ. ಅಂದರೆ ಯುಪಿಎ ಅವಧಿಗೆ ಹೋಲಿಸಿದರೆ ಶೇ.239 ಅಥವಾ 3.4 ಪಟ್ಟು ಹೆಚ್ಚಳವಾಗಿದೆ.
ಈಗ ಅನುದಾನದ ವಿಷಯಕ್ಕೆ ಬರೋಣ. 2004-14ರ ನಡುವಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕವು 60,779 ಕೋಟಿ ರೂ. ಅನುದಾನ ಪಡೆದಿದ್ದರೆ, ಎನ್ಡಿಎ ಸರ್ಕಾರದ ಅವಧಿಯಲ್ಲಿ 2014-24ರ ನಡುವೆ (ಆರ್ಥಿಕ ವರ್ಷ 2022-23ರವರೆಗೆ) 2.08 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಪಡೆದಿದೆ. ಅಂದರೆ ಯುಪಿಎ ಅಧಿಗೆ ಹೋಲಿಸಿದರೆ ಕರ್ನಾಟಕಕ್ಕೆ ಸಿಕ್ಕ ಕೇಂದ್ರ ಅನುದಾನ 243% ಅಥವಾ 3.4 ಪಟ್ಟು ಹೆಚ್ಚಳವಾಗಿದೆ. ಇನ್ನು ರೈಲ್ವೆ ಯೋಜನೆಗಳಿಗೆ ಬರೋಣ. 2009ರಿಂದ 2014ರ ಅವಧಿಯಲ್ಲಿ ಕರ್ನಾಟಕದವರೇ ಇಬ್ಬರು ರೈಲ್ವೆ ಖಾತೆ ಸಚಿವರಾಗಿದ್ದರೂ ಸಹ ಕರ್ನಾಟಕಕ್ಕೆ ಕೇವಲ 835 ಕೋಟಿ ದೊರೆತಿತ್ತು. ಅದೇ ಎನ್ಡಿಎ ಸರ್ಕಾರ ಬಂದ ಮೇಲೆ 2014-22ರ ಅವಧಿಯಲ್ಲಿ ಒಟ್ಟು 3,424 ಕೋಟಿ ಹಾಗೂ 2023-24 ಒಂದೇ ವರ್ಷದಲ್ಲಿ 7,561 ಕೋಟಿ ಅನುದಾನ ದೊರೆತಿದೆ.