ಬೆಂಗಳೂರು:ಬಜೆಟ್ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಪ್ರಶಂಸೆ ಮಾಡಿದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿ, ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಬಿಜೆಪಿಯ ಶಾಸಕ ವೇದವ್ಯಾಸ್ ಕಾಮತ್ ಬಜೆಟ್ ಬಗ್ಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಕೇಂದ್ರ ಸರ್ಕಾರ ಹಾಗೂ ಮೋದಿ ಅವರನ್ನು ದೂಷಣೆ ಮಾಡಿದ್ದಾರೆ. ಪ್ರಧಾನಿ ಅವರು ರಾಷ್ಟ್ರಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಅಂಕಿ - ಅಂಶಗಳ ಸಹಿತ ಪ್ರಸ್ತಾಪ ಮಾಡಲು ಮುಂದಾದರು. ಆಗ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಏರುದನಿಯಲ್ಲಿ ಪದೇ ಪದೆ ಮಾತಿನ ಚಕಮಕಿ ನಡೆಯಿತು. ಒಂದೂವರೆ ಗಂಟೆಗೂ ಹೆಚ್ಚು ಸಮಯ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಸದಸ್ಯರು ವಾಕ್ಸಮರದಲ್ಲೇ ತೊಡಗಿದ್ದರು. ಈ ಸಮರವನ್ನು ಹತೋಟಿಗೆ ತರುವುದಕ್ಕಾಗಿ ಸ್ಪೀಕರ್ ಯು.ಟಿ.ಖಾದರ್ ಹರಸಾಹಸಪಟ್ಟರು.
ಮೋದಿ ಸರ್ಕಾರ ದೇಶದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಅವರ್ಣನೀಯ ಎಂಬುದು ಕಾಮತ್ ಮಾತಿನ ಒಟ್ಟಾರೆ ಸಾರಾಂಶವಾಗಿತ್ತು. ಇದು ಗದ್ದಲದ ವಾತಾವರಣಕ್ಕೆ ಕಾರಣವಾಯಿತು. ಕಾಮತ್ ಅವರ ಮಾತು ಮಾತಿಗೂ ಕಾಂಗ್ರೆಸ್ ಸದಸ್ಯರಿಂದ ಪ್ರತಿರೋಧ ವ್ಯಕ್ತವಾಗಲಾರಂಭಿಸಿತು. ಬಜೆಟ್ಗೆ ಸೀಮಿತವಾಗಿ ಮಾತನಾಡಿ. ಮೋದಿ ಸಾಧನೆಗಳ ಬಣ್ಣನೆ ಇಲ್ಲೇಕೆ ಎಂಬುದು ಕಾಂಗ್ರೆಸ್ ಸದಸ್ಯರ ವಾದವಾಗಿತ್ತು. ಪದೇ ಪದೆ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ, ನಯನ ಮೋಟಮ್ಮ, ಶಿವಲಿಂಗೇಗೌಡ ಮತ್ತಿತರರು ಕಾಮತ್ ಅವರ ಮಾತಿಗೆ ಅಡ್ಡಿಪಡಿಸುತ್ತಿದ್ದರು. ಇದರಿಂದ ಗದ್ದಲ, ವಾಗ್ವಾದ ಉಂಟಾಯಿತು.