ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳ ನಡುವೆ ಬಸ್ ಸಂಚಾರ ಆರಂಭಗೊಂಡಿದ್ದು, ಇದೀಗ ನಡೆದಿರುವ ಘಟನೆವೊಂದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ನಗರದ ಹೃದಯಭಾಗ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ದಿಢೀರನೇ ಹೆಬ್ಬಾವು ಕಾಣಿಸಿಕೊಂಡಿದೆ.
ಪ್ರಯಾಣಿಕರೊಂದಿಗೆ ಬಸ್ನಲ್ಲಿ ಬಂದ ಹೆಬ್ಬಾವು ಲಾಕ್ಡೌನ್ ವೇಳೆ ಕಳೆದ ಕೆಲ ತಿಂಗಳಿಂದ ಬಸ್ ನಿಂತಲ್ಲೇ ನಿಂತಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಬಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರ ಜೊತೆ ಈ ಹೆಬ್ಬಾವು ಪ್ರಯಾಣಿಸಿದೆ.
ಟ್ರಿಪ್ ಬಳಿಕ ಸ್ಯಾನಿಟೈಸ್ ಮಾಡಲು ಸೋಂಕು ನಿವಾರಕ ಔಷಧಿ ಬಸ್ಗೆ ಹೊಡೆದಾಗ ಹೆಬ್ಬಾವು ಹೊರ ಬಂದಿದ್ದು, ಬಸ್ ಸಿಬ್ಬಂದಿಗಳಿಗೆ ದಿಗಿಲು ಮೂಡಿಸಿದೆ. ಕೂಡಲೇ ಪಾಲಿಕೆ ಅರಣ್ಯ ವಿಭಾಗದ ವನ್ಯ ಜೀವಿ ಸಂರಕ್ಷಕರಿಗೆ ರಾತ್ರಿ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ರಾಜೇಶ್, ಹಾವನ್ನು ರಕ್ಷಣೆ ಮಾಡಿದ್ದಾರೆ.
ಇಂಡಿಯನ್ ರಾಕ್ ಪೈಥಾನ್ ಜಾತಿಯ ಹೆಬ್ಬಾವು ಇದಾಗಿದ್ದು, ಮಂಗಳೂರಿನ ಭಾಗದಿಂದ ಬಂದಿದೆ ಎಂದು ತಿಳಿಸಿದ್ದಾರೆ. ಬಸ್ ಮೀಟರ್ ಜಾಗದಲ್ಲಿ ಸುತ್ತಿಕೊಂಡಿದ್ದು, ಸ್ಪ್ರೇ ಮಾಡಿದಾಗ ಅದು ಹೊರಗೆ ಬಂದಿದೆ. ಮತ್ತೆ ಇದನ್ನು ಸುರಕ್ಷಿತವಾಗಿ ಮಂಗಳೂರಿಗೆ ತಲುಪಿಸಲು ನಿರ್ಧರಿಸಲಾಗಿದ್ದು, ಬಾಕ್ಸ್ ವ್ಯವಸ್ಥೆ ಮಾಡಿ, ಏನೂ ಹಾನಿಯಾಗದಂತೆ ಕಾಡಿಗೆ ಮರಳಿ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.