ಬೆಂಗಳೂರು:ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಚುರುಕುಗೊಂಡಿದೆ. ಈಗಾಗಲೇ ಪಿಯುಸಿ ಪರೀಕ್ಷೆಗಳೆಲ್ಲವೂ ಮುಗಿದಿದ್ದು, ಇದರ ಬೆನ್ನಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಯನ್ನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ನಂತರ ಮೊದಲ ಕಾರ್ಯನಿರತ ದಿನದಿಂದ ಪ್ರಾರಂಭವಾಗಲಿದೆ. ಹಾಗೆಯೇ ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆಯು ಜೂನ್ 1 ರಿಂದ ಶುರುವಾಗಲಿದೆ. ಹಾಗೆಯೇ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ತರಗತಿಗಳು ಜೂನ್ 9 ರಿಂದ ಶುರುವಾಗಲಿವೆ.
ಕಳೆದ 3 ವರ್ಷಗಳಿಂದ ಶೂನ್ಯ ದಾಖಲಾತಿಯನ್ನು ಹೊಂದಿರುವ ಕಾಲೇಜುಗಳು ಯಾವುದೇ ಕಾರಣಕ್ಕೂ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ / ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಾರದು. ಅದಾಗಿಯೂ ಒಂದು ವೇಳೆ ದಾಖಲಾತಿ ಮಾಡಿಕೊಂಡಲ್ಲಿ ಮುಂದೆ ಸಂಭವಿಸುವ ಆಗು - ಹೋಗುಗಳಿಗೆ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರನ್ನೇ ಆಡಳಿತ ಮಂಡಳಿ ನೇರಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರದಂತೆ ಸಮವಸ್ತ್ರ:ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರ ಗಲಾಟೆ ಆಗಿದ್ದು ಗೊತ್ತೇ ಇದೆ. ಹೀಗಾಗಿ, ಈ ಸಲ ಮುನ್ನೆಚ್ಚರಿಕೆ ವಹಿಸಿರುವ ಪಿಯು ಬೋರ್ಡ್ ಆಯಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರದಂತೆ ಸಮವಸ್ತ್ರ ಕಡ್ಡಾಯ ಎಂದು ತಿಳಿಸಿದೆ. ಈಗಾಗಲೇ ಉಚ್ಚ ನ್ಯಾಯಾಲಯವು ಶಾಲಾ - ಕಾಲೇಜುಗಳಲ್ಲಿ ಸಮವಸ್ತ್ರ ಸಂಬಂಧ ಮಾರ್ಚ್ 15 ರಂದು ತೀರ್ಪು ನೀಡಿದೆ.
ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಸರ್ಕಾರದ ಆದೇಶವನ್ನು ಸಿಂಧುಗೊಳಿಸಿರುವ ಕಾರಣ, ಪದವಿ ಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜು ಅಭಿವೃದ್ಧಿ ಸಮಿತಿಯು ನಿರ್ಧರಿಸಿರುವಂತಹ ಸಮವಸ್ತ್ರಗಳನ್ನು ಧರಿಸತಕ್ಕದ್ದು. ಆಡಳಿತ ಮಂಡಳಿಗಳು / ಸಿ.ಡಿ.ಸಿ ಸಮವಸ್ತ್ರವನ್ನು ನಿಗದಿಪಡಿಸದೇ ಇದ್ದಲ್ಲಿ ಸಮಾನತೆ ಮತ್ತು ಐಕ್ಯತೆ ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸುವಂತೆ ಸೂಚಿಸಿದೆ. ಹಾಗೆಯೇ ಈ ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತೆ ಅಂತ ಎಚ್ಚರಿಕೆಯನ್ನ ನೀಡಿದೆ.
ಓದಿ:ಎಸ್ಎಸ್ಎಲ್ಸಿ ರಿಸಲ್ಟ್: ದ.ಕ ಜಿಲ್ಲೆಯ 17 ವಿದ್ಯಾರ್ಥಿಗಳಿಗೆ 625/625 ಅಂಕ