ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಮೀಸಲಾತಿ ನಿರ್ಧಾರ ಕೈಗೊಳ್ಳಲಾಗಿದೆ. ಒಳಮೀಸಲಾತಿ ಹಾಗೂ ವೀರಶೈವ ಲಿಂಗಾಯತರ 2D ಮತ್ತು ಒಕ್ಕಲಿಗರ 2C ಪ್ರವರ್ಗಕ್ಕೆ ಮೀಸಲಾತಿ ನೀಡಿ ಒಪ್ಪಿಗೆ ನೀಡಲಾಗಿದೆ. ಇತ್ತ 2Bಯಡಿಯ ಮುಸ್ಲಿಂ ಮೀಸಲಾತಿಗೆ 2D ಮತ್ತು 2C ಮೀಸಲಾತಿಗಾಗಿ ಸರ್ಕಾರ ಕತ್ತರಿ ಹಾಕಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಗೆ ಒಪ್ಪಿಗೆ ನೀಡಲಾಗಿದೆ. ಇತ್ತ 2Bಯಲ್ಲಿನ ಮುಸ್ಲಿಂ ಮೀಸಲಾತಿಗೆ ಕತ್ತರಿ ಹಾಕಿದ್ದು, ಅದನ್ನು 2D ಮತ್ತು 2Cಗೆ ಮರು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಆ ಮೂಲಕ ಒಕ್ಕಲಿಗರಿಗೆ 2Cಯಡಿ 6% ಮತ್ತು ವೀರಶೈವ ಲಿಂಗಾಯತರಿಗೆ 2Dಯಡಿ 7% ಮೀಸಲಾತಿ ನೀಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಒಳಮೀಸಲಾತಿಗೆ ಸಂಪುಟ ಅಸ್ತು:ಒಳಮೀಸಲಾತಿ ಸಂಬಂಧ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೆವು. ಅದರ ಪ್ರಕಾರ ಎಸ್ಸಿ ಮೀಸಲಾತಿಯಡಿ ಎಲ್ಲರಿಗೂ ನ್ಯಾಯ ಸಿಗಬೇಕು. ಅವರ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ARTICLE 342 ಅನ್ವಯ ಎಸ್ಸಿ ಗಳನ್ನು ನಾಲ್ಕು ಗುಂಪಲ್ಲಿ ವರ್ಗೀಕರಿಸಲಾಗಿದೆ. ಎಸ್ಸಿ ಎಡ, ಎಸ್ಸಿ ಬಲ, ಸ್ಪರ್ಶಿಯರು, ಇತರರೆಂದು ನಾಲ್ಕು ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಸಂಪುಟ ಉಪಸಮಿತಿ ವರದಿಯ ಆಧಾರದಲ್ಲಿ ಎಡಕ್ಕೆ 6%, ಬಲಕ್ಕೆ 5.5%, ಸ್ಪರ್ಶಿಯರು 4.5%, ಇತರರಿಗೆ 1% ಒಳ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ.
ನ್ಯಾ.ಸದಾಶಿವ ಆಯೋಗದ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ. ಇದರ ಪ್ರಕಾರ ಶೇ.33.4ರಷ್ಟಿರುವ ಒಂದನೇ ಗುಂಪಿಗೆ (ಎಡಗೈ ಪ.ಜಾ) ಶೇ.6, ಶೇ.32ರಷ್ಟಿರುವ (ಬಲಗೈ ಪ.ಜಾ) ಎರಡನೇ ಗುಂಪಿಗೆ ಶೇ.5, ಶೇ.23.64ರಷ್ಟಿರುವ (ಸ್ಪರ್ಶ ಪರಿಶಿಷ್ಟ ಜಾತಿ) ಮೂರನೇ ಗುಂಪಿಗೆ ಶೇ.3 ಮತ್ತು ಶೇ.4.65 ರಷ್ಟಿರುವ ಇತರ ಪರಿಶಿಷ್ಟ ಜಾತಿಯವರಿಗೆ ಶೇ.1ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡುವಂತೆ ಶಿಫಾರಸು ಮಾಡಿತ್ತು.
ಇದೇ ವೇಳೆ ಸ್ಪರ್ಶ್ಯ ಜಾತಿಗಳಾದ ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿನಿಂದ ಹೊರಗಿಡಬೇಕೆಂಬ ಬೇಡಿಕೆಯನ್ನು ಆಯೋಗ ತಿರಸ್ಕರಿಸಿತ್ತು. ಸಮೀಕ್ಷೆಯ ಪ್ರಕಾರ ಎಡಗೈ ಗುಂಪಿನ (ಮಾದಿಗ ಜಾತಿ) ಜನಸಂಖ್ಯೆ 32,35,517 (ಶೇ. 33.47), ಬಲಗೈ ಗುಂಪಿನ (ಹೊಲೆಯ ಜಾತಿ) ಜನಸಂಖ್ಯೆ 30,93,693 (ಶೇ. 32.01), ಇತರೆ ಪರಿಶಿಷ್ಟ ಜಾತಿಗಳು 4,49,879 (ಶೇ. 46.5) ಮತ್ತು ಸ್ಪೃಶ್ಯ ಜಾತಿಗಳ ಜನಸಂಖ್ಯೆ 22,84,642 (ಶೇ. 23.64) ಇದೆ. ಬೊಮ್ಮಾಯಿ ಸರ್ಕಾರ ಪರಿಶಿಷ್ಟ ಜಾತಿಗಿರುವ 17% ಮೀಸಲಾತಿಯನ್ನು ಸಂಪುಟ ಉಪಸಮಿತಿ ವರದಿಯ ಆಧಾರದಲ್ಲಿ ಎಡಕ್ಕೆ 6%, ಬಲಕ್ಕೆ 5.5%, ಸ್ಪರ್ಶಿಯರು 4.5%, ಇತರರಿಗೆ 1%ರಂತೆ ಒಳ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ.
ಮುಸ್ಲಿಂ ಮೀಸಲಾತಿಗೆ ಕತ್ತರಿ, ಒಕ್ಕಲಿಗರಿಗೆ, ವೀರಶೈವರಿಗೆ ಹಂಚಿಕೆ: ಇತ್ತ 2Bಯಡಿ ಇದ್ದ ಮುಸ್ಲಿ ಸಮುದಾಯದ 4% ಮೀಸಲಾತಿಗೆ ಬಿಜೆಪಿ ಸರ್ಕಾರ ಸಂಪೂರ್ಣ ಕತ್ತರಿ ಹಾಕಿದೆ. ಈ 4% ಮೀಸಲಾತಿಯನ್ನು ಹೊಸದಾಗಿ ಸೃಷ್ಟಿ ಮಾಡಲಾಗಿರುವ ಒಕ್ಕಲಿಗರಿಗಾಗಿನ 2C ಪ್ರವರ್ಗ ಹಾಗೂ ವೀರಶೈವ ಲಿಂಗಾಯತರಿಗಾಗಿನ 2D ಪ್ರವರ್ಗಕ್ಕೆ ತಲಾ 2%ರಂತೆ ಹಂಚಿಕೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.