ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಕೂರಿಸಿಕೊಂಡು ಭ್ರಷ್ಟಾಚಾರ ರಹಿತ ಸರ್ಕಾರ ನೀಡುವ ಶಾ ಭರವಸೆ ಪ್ರಶ್ನಿಸಿ ಆಯೋಗಕ್ಕೆ ದೂರು: ಪ್ರಿಯಾಂಕ್ ಖರ್ಗೆ

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಶಿವಾಜಿನಗರ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಕಷ್ಟು ಗೊಂದಲಗಳು ಹೆಚ್ಚಾಗಿವೆ ಎಂದು ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ರಿಜ್ವಾನ್ ಅರ್ಷದ್
ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ರಿಜ್ವಾನ್ ಅರ್ಷದ್

By

Published : Mar 8, 2023, 5:00 PM IST

ಶಾಸಕ ರಿಜ್ವಾನ್ ಅರ್ಷದ್​ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದರು

ಬೆಂಗಳೂರು: ಬಿಜೆಪಿ ಸರ್ಕಾರ ಹತಾಶರಾಗಿದ್ದು, ಅಮಿತ್ ಶಾ ಅವರು ಬೊಮ್ಮಾಯಿ ಅವರನ್ನು ಪಕ್ಕ ಕೂರಿಸಿಕೊಂಡು ಮೋದಿ ಮುಖ ನೋಡಿ ಮತ ಹಾಕಿ ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಹೇಳಿದ್ದಾರೆ. ನಾವು ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಚಿಲುಮೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ಕೆಲವು ಐಎಎಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ದಾಖಲಿಸಿದ್ದೇವೆ. ಆಳಂದದಲ್ಲಿ 6 ಸಾವಿರ ಮತಗಳ ಹೆಸರು ತೆಗೆದುಹಾಕಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಬಂದ ನಂತರವೂ ಈ ರೀತಿ ಆದರೆ, ರಾಜ್ಯದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಕೋರ್ಟ್ ಮೆಟ್ಟಿಲೇರಿರುವ 22 ಮಂದಿ ಹೆಸರು ಉಳಿಸಿಕೊಳ್ಳುತ್ತೇವೆ ಎನ್ನುವುದಾದರೆ, ಉಳಿದ 9 ಸಾವಿರ ಮಂದಿಯನ್ನು ಯಾಕೆ ಕೈಬಿಡಲಾಗುವುದು? ಯಾರ ನಿರ್ದೇಶನದ ಮೇರೆಗೆ ಈ ರೀತಿ ಕೆಲಸ ಮಾಡುತ್ತಿದ್ದಾರೆ? ಶಿವಾಜಿನಗರದಲ್ಲಿ 26 ಸಾವಿರ ಮತದಾರರ ಹೆಸರು ತೆಗೆಯಲು ಪಟ್ಟಿ ನೀಡಿದ್ದರು. ಅವರಿಗೆ ಹೇಗೆ ಪಟ್ಟಿ ಸಿಕ್ಕಿತು? ಈ ಖಾಸಗಿ ಸಂಸ್ಥೆ ಮಾಲೀಕರ ಬಗ್ಗೆ ಈವರೆಗೂ ಸರ್ಕಾರ ಯಾಕೆ ತನಿಖೆ ಮಾಡಿಲ್ಲ? ಎಂದು ಪ್ರಶ್ನಿಸಿದರು.

ಶಿವಾಜಿನಗರ ಸೇರಿ ಇತರ ಕ್ಷೇತ್ರಗಳಲ್ಲಿ ಹೆಚ್ಚಿದ ಗೊಂದಲ:ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಶಿವಾಜಿನಗರ ಹಾಗೂ ಇತರ ಕ್ಷೇತ್ರಗಳಲ್ಲಿ ಬಹಳಷ್ಟು ಗೊಂದಲ ಹೆಚ್ಚಾಗಿದೆ. ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಖಾಸಗಿ ಸಂಸ್ಥೆಗಳ ಹಸ್ತಕ್ಷೇಪದ ಬಗ್ಗೆ ನಾನು ತಿಳಿಸಿದ್ದೆ. ಈ ವಿಚಾರವಾಗಿ ಅನೇಕ ಅಧಿಕಾರಿಗಳು ಅಮಾನತುಗೊಂಡು ಜೈಲು ಪಾಲಾದರು. ಸ್ವತಃ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ನಕಲಿ ಬಿಎಲ್​ಒ ನೇಮಕವಾಗಿದ್ದ ಚಿಕ್ಕಪೇಟೆ, ಶಿವಾಜಿನಗರ ಹಾಗೂ ಮಹದೇವಪುರ ಕ್ಷೇತ್ರಗಳಲ್ಲಿ ಯಾವ ಹೆಸರು ಸೇರ್ಪಡೆಯಾಗಿದ್ದವು, ತೆಗೆಯಲಾಗಿತ್ತೋ ಆ ಹೆಸರುಗಳನ್ನು ಪರಿಶೀಲಿಸಲು ತೀರ್ಮಾನಿಸಲಾಗಿತ್ತು ಎಂದು ಹೇಳಿದರು.

ಈ ಮೂರು ಕ್ಷೇತ್ರಗಳಲ್ಲಿ ವಿಶೇಷವಾಗಿ ಐಎಎಸ್ ಅಧಿಕಾರಿ ನೇಮಕ ಮಾಡಿ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ಮಾಡಲಾಯಿತು. ಇದೆಲ್ಲವೂ ಆದ ನಂತರ ಜ.15ರಂದು ಮತದಾರರ ಪಟ್ಟಿ ಬಿಡುಗಡೆಯಾಯಿತು. ನಂತರ ಬಿಜೆಪಿ ದೂರು ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಂತೆ ದೂರು ನೀಡಿತು. ಯಾವುದೇ ರಾಜ್ಯದಲ್ಲಿ ಚುನಾವಣೆಗೂ 6 ತಿಂಗಳ ಮುಂಚಿತವಾಗಿ ಸ್ವಯಂ ಪ್ರೇರಣೆಯಿಂದ ಯಾವುದೇ ಹೆಸರು ತೆಗೆಯುವಂತಿಲ್ಲ ಎಂದು ಚುನಾವಣಾ ಆಯೋಗದ ನಿರ್ದೇಶನ ಸ್ಪಷ್ಟವಾಗಿದೆ.

ಪರಿಶೀಲನೆ ನಡೆಯುವ ಸಂದರ್ಭದಲ್ಲಿ ಯಾರು ಬೇಕಾದರೂ ಯಾರ ಹೆಸರ ವಿಚಾರವಾಗಿ ಅರ್ಜಿ ಮೂಲಕ ಆಕ್ಷೇಪ ಸಲ್ಲಿಸಬಹುದು. ಆದರೆ ಈ ಅರ್ಜಿ ಹಾಕದೇ ಹೆಸರು ತೆಗೆಯಲು ಸಾಧ್ಯವಿಲ್ಲ. ಹೀಗಿರುವಾಗ ಇಂತಹ ಯಾವುದೇ ಅರ್ಜಿ ಇಲ್ಲದೇ, ಕೇವಲ ಬಿಜೆಪಿ ದೂರಿನ ಹಿನ್ನೆಲೆಯಲ್ಲಿ 9195 ಮತದಾರರಿಗೆ ನೋಟಿಸ್​​ ಜಾರಿ ಮಾಡಲಾಗಿತ್ತು. 193 ಬೂತ್ ಪೈಕಿ ಈ ಮತದಾರರು ಕೇವಲ 91 ಬೂತ್ ಗಳಿಗೆ ಮಾತ್ರ ಸಂಬಂಧಿಸಿದ್ದಾರೆ. ಈ ಬೂತ್ ಗಳಲ್ಲಿ ಮಾತ್ರ ಬಿಜೆಪಿ ದೂರು ನೀಡಿದ್ದಾರೆ. ಇದರಲ್ಲಿ ಕ್ರೈಸ್ತರು, ಮುಸಲ್ಮಾನರು ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮತದಾರರಿದ್ದಾರೆ ರಿಜ್ವಾನ್​ ಅರ್ಷದ್​​ ಹೇಳಿದರು.

ಇವರಿಗೆ ನೋಟಿಸ್​ ನೀಡಲಾಗಿದ್ದು, ಈ ನೋಟಿಸ್​ಗೆ ಉತ್ತರ ನೀಡಿದ ನಂತರ ಎರಡನೇ ನೋಟಿಸ್​ ಜಾರಿ ಮಾಡಿದರು. ಈ 9195 ಮತದಾರರ ಪೈಕಿ 22 ಮಂದಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಹಾಕಿದ್ದರು. ಸುಮೋಟೋ ಮೂಲಕ ಹೆಸರು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಅರ್ಜಿ ಹಾಕಿದ್ದು, ಈ ವಿಚಾರವಾಗಿ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದು, ಅದರಲ್ಲಿ ಈ 22 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಯಸಮ್ಮತ ಚುನಾವಣೆ ನಮ್ಮ ಹಕ್ಕಾಗಿದೆ: ಹೈಕೋರ್ಟ್​ನಲ್ಲಿ ಹೆಸರು ತೆಗೆಯುವುದಿಲ್ಲ ಎಂದು ಹೇಳುವುದಾದರೆ ಅವರಿಗೆ ನೋಟೀಸ್ ಜಾರಿ ಮಾಡಿದ್ದು ಯಾಕೆ? ಚುನಾವಣಾ ಆಯೋಗದ ನಿಯಮದ ಪ್ರಕಾರ, ಚುನಾವಣೆಗೆ 6 ತಿಂಗಳ ಮುಂಚಿತವಾಗಿ ಸ್ವಯಂ ಪ್ರೇರಣೆಯಿಂದ ಹೆಸರು ತೆಗೆಯುವಂತಿಲ್ಲ. ಆದರೂ ಬಿಜೆಪಿ ಒತ್ತಡಕ್ಕೆ ಮಣಿದು ನೋಟೀಸ್ ನೀಡಿರುವುದೇಕೆ? ಈ 22 ಜನಕ್ಕೆ ಹೆಸರನ್ನು ತೆಗೆಯುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಉಳಿದ 9 ಸಾವಿರ ಜನರ ಕಥೆ ಏನು? ಇವರೆಲ್ಲರೂ ಹೈಕೋರ್ಟ್ ಮೊರೆ ಹೋಗಬೇಕೆ? ಹೈಕೋರ್ಟ್ ಹೋದವರಿಗೆ ಮಾತ್ರ ರಕ್ಷಣೆ, ಹೋಗದವರ ಮೂಲಭೂತ ಹಕ್ಕು ಕಸಿಯಲು ಸಾಧ್ಯವೇ? ಯಾರ ನಿರ್ದೇಶನದ ಮೇರೆಗೆ ಈ ರೀತಿ ಮಾಡುತ್ತಿದ್ದೀರಿ? ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಮ್ಮ ಹಕ್ಕಾಗಿದೆ. ಚುನಾವಣಾ ಆಯೋಗವೇ ಪರಿಶೀಲನೆ ನಡೆಸಿರುವ ಪಟ್ಟಿಯಲ್ಲಿ 9 ಸಾವಿರ ಜನರಿಗೆ ನೋಟೀಸ್ ನೀಡಿರುವುದೇಕೆ? ಎಂದು ಕೇಳಿದರು.

ಚುನಾವಣೆಗೂ ಎರಡು ತಿಂಗಳ ಮುಂಚೆ ಹೆಸರು ತೆಗೆಯುತ್ತಾ ಹೋದರೆ ಮುಂದಿನ ಯಾವ ಚುನಾವಣೆಯನ್ನು ನ್ಯಾಯುತವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಚುನಾವಣೆ ಪ್ರಕ್ರಿಯೆ, ಮತದಾರರ ಪಟ್ಟಿ ತಿರುಚಿ ಒಂದು ವರ್ಗದ ಮತದಾರರನ್ನು ಬಿಟ್ಟು ಚುನಾವಣೆ ಮಾಡಿದರೆ ನ್ಯಾಯಯುತ ಚುನಾವಣೆ ಹೇಗೆ ಸಾಧ್ಯ? ಚುನಾವಣಾ ಆಯೋಗದ ಕಚೇರಿ ಇರುವ ನನ್ನ ಕ್ಷೇತ್ರದಲ್ಲಿ ಈ ರೀತಿ ಆದರೆ, ಬೇರೆ ಕ್ಷೇತ್ರಗಳ ಕಥೆ ಏನು? ಈ 9 ಸಾವಿರ ಮತದಾರರ ಹೆಸರು ತೆಗೆದು ಚುನಾವಣೆ ಮಾಡಿದರೆ ಅದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದಾರೆ- ರಿಜ್ವಾನ್​ ಅರ್ಷದ್​​: ನಾವು ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರುತ್ತೇವೆ. ನ್ಯಾಯಯುತ ಚುನಾವಣೆ ನಡೆಯಬೇಕು. ಯಾವುದೇ ರೀತಿಯಲ್ಲಿ ಒಬ್ಬ ಮತದಾರರ ಹಕ್ಕನ್ನು ತೆಗೆದರೂ ನಾವು ಹೋರಾಟ ಮಾಡುತ್ತೇವೆ. ಇದೇ ರೀತಿ ಶಾಂತಿನಗರ ಕ್ಷೇತ್ರದಲ್ಲಿ ನಡೆಯುತ್ತಿದೆ. ಆಳಂದದಲ್ಲಿ ಬೇರೆ ರಾಜ್ಯಗಳಿಂದ ಕೂತು ಮತದಾರರ ಹೆಸರು ತೆಗೆಯಲು ಅರ್ಜಿ ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಯುತ ಚುನಾವಣೆ ಸಾಧ್ಯವೇ?. ಬೆಲೆ ಏರಿಕೆ, ನಿರುದ್ಯೋಗ, ಶೇ 40ರಷ್ಟು ಕಮಿಷನ್ ನಂತರ ಈ ರೀತಿ ಅಡ್ಡದಾರಿಯಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ. ಅದಕ್ಕಾಗಿ ಬಿಜೆಪಿಯವರು ಈ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡ್ತೇವೆ: ಯಡಿಯೂರಪ್ಪ

ABOUT THE AUTHOR

...view details